12ನೇ ಶತಮಾನದಲ್ಲಿ ಶರಣ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ಜಗಜ್ಯೋತಿ ಬಸವೇಶ್ವರರಿಗೆ ತಮ್ಮ ತೊಡೆಯ ಚರ್ಮದಿಂದ ಪಾದುಕೆಗಳನ್ನು ಮಾಡಿ ಅರ್ಪಿಸಿದ್ದರು. ಈ ಪಾದುಕೆಗಳು ಈಗ ಬಿಜ್ಜನಹಳ್ಳಿ ಗ್ರಾಮದಲ್ಲಿದೆ. ಈ ಪಾದುಕೆಗೆ ರೋಚಕವಾದ ಇತಿಹಾಸವಿದೆ.

ಮಹಾಶರಣ ಹರಳಯ್ಯನವರು 12ನೇ ಶತಮಾನದಲ್ಲಿ ಪಾರಪಯ್ಯ ಮತ್ತು ಹೊನ್ನಮ್ಮ ದಂಪತಿಗೆ ದವನದ ಹುಣ್ಣಿಮೆಯಂದು ಬಿಜಾಪುರ ಜಿಲ್ಲೆಯ ಕಲಿಗೂಡಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಅವರದು ಅಪರೂಪದ ವ್ಯಕ್ತಿತ್ವ. ಸತ್ಯವಂತರೂ, ಸಜ್ಜನರೂ, ಸಾತ್ವಿಕ ಶರಣರೂ ಆಗಿದ್ದರು. ಬಾಲ್ಯದಲ್ಲಿಯೇ ಬೆಂಕಿ ಹತ್ತಿ ಉರಿಯುವಾಗ ಮಳೆ ತರಿಸಿದ, ಹಾವು ಕಚ್ಚಿದ ರಾಜನನ್ನು ಉಳಿಸಿದ ಅವರ ಪವಾಡಗಳ ಕುರಿತು ಹಲವು ಕಥೆಗಳಿವೆ.

ಶರಣ ಹರಳಯ್ಯನವರು ಕಲ್ಯಾಣಮ್ಮನನ್ನು ವಿವಾಹವಾದರು. ನಂತರ ಕಲ್ಬುರ್ಗಿಯ ಶಹಾಪುರ ತಾಲೂಕಿನ ಸಗರದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಕೆಲವು ಸಾಹಿತ್ಯಗಳು ಹೇಳುತ್ತವೆ. ಮೊದಲಿನಿಂದಲೂ ತಮ್ಮ ಕುಲ ಕಸುಬಾದ ಜೋಡು ತಯಾರಿಕೆಯಲ್ಲಿ ದಂಪತಿಗಳಿಬ್ಬರೂ ತೊಡಗಿದ್ದರು. ಈ ಸಮಯದಲ್ಲಿಯೇ ಅವರು ವಿಶ್ವಗುರು ಬಸವಣ್ಣನವರ ಕುರಿತು ಜನರ ಬಾಯಲ್ಲಿ ಕೇಳಿದರು. ಬಸವಣ್ಣನವರ ಜ್ಞಾನ, ಸರಳತೆ ಎಲ್ಲವನ್ನೂ ಕೇಳಿ ಅವರನ್ನು ನೋಡಲೇಬೇಕೆಂಬ ಆಸೆಯಿಂದ ಕಲ್ಯಾಣಕ್ಕೆ ಬಂದರು.

ಶರಣ ಚಳುವಳಿಯಲ್ಲಿ ಪಾಲ್ಗೊಂಡವರನ್ನು ಶರಣರು ಎಂದು ಕರೆಯುತ್ತಾರೆ. ಒಬ್ಬ ಶರಣ ಮತ್ತೊಬ್ಬ ಶರಣನಿಗೆ ಶುಭಾಶಯ ತಿಳಿಸಲು ಶರಣು ಎನ್ನುವುದು ರೂಢಿಯಲ್ಲಿದ್ದ ಸಂಪ್ರದಾಯ. ಹೀಗೆ ಒಮ್ಮೆ ಹರಳಯ್ಯ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಅಕಸ್ಮಾತ್ತಾಗಿ ಬಸವಣ್ಣನವರನ್ನು ಕಂಡರು. ಸಂತೋಷದಿಂದ ಕೈಮುಗಿದು ಶರಣು ಎಂದು ಶುಭಾಶಯ ತಿಳಿಸಿದರು ಹರಳಯ್ಯ. ಅದಕ್ಕೆ ಪ್ರತಿಯಾಗಿ ಬಸವೇಶ್ವರರು ಕೈ ಮುಗಿದು ಶರಣು ಶರಣಾರ್ಥಿ ಎಂದು ಶುಭಾಶಯ ಕೋರಿದರು. ಸಾಮಾನ್ಯ ಕಸುಬಿನವನಾದ ತನಗೆ ಬಸವಣ್ಣ ಶರಣರು ಶರಣಾರ್ಥಿ ಎಂದರಲ್ಲಾ ಎಂದು ಹರಳಯ್ಯನ ಮನಸ್ಸಿನಲ್ಲಿ ಕಳವಳವುಂಟಾಯಿತು. ಹರಳಯ್ಯನವರ ಕಸುಬನ್ನು ಆಗ ತಿರಸ್ಕಾರದಿಂದ ಕಾಣುತ್ತಿದ್ದ ದಿನಗಳವು. ಇದೇ ಕಳವಳ ಹೊತ್ತು ಮನೆಗೆ ಹಿಂದುರುಗಿದ ಹರಳಯ್ಯ ಇದಕ್ಕೆ ತಕ್ಕ ಪ್ರಾಯಶ್ಚಿತ್ತವಾಗಬೇಕು ಎಂದು ತನ್ನ ಪತ್ನಿ ಕಲ್ಯಾಣಮ್ಮರೊಡನೆ ಚರ್ಚಿಸಿದರು.

ಶರಣ ಹರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಒಂದು ಜೊತೆ ಪಾದರಕ್ಷೆಯನ್ನು ಮಾಡಿ ಬಸವೇಶ್ವರರಿಗೆ ಅರ್ಪಿಸಬೇಕೆಂದು ನಿರ್ಧರಿಸಿದರು. ಪತ್ನಿ ಕಲ್ಯಾಣಮ್ಮ ಕೂಡ ಈ ಅರ್ಪಣೆಯಲ್ಲಿ ಭಾಗಿಯಾಗುತ್ತೇನೆಂದು ವಿನಂತಿಸಿಕೊಳ್ಳುತ್ತಾರೆ. ಹರಳಯ್ಯನವರು ತಮ್ಮ ಬಲತೊಡೆಯ ಚರ್ಮವನ್ನೂ, ಕಲ್ಯಾಣಮ್ಮನವರು ತಮ್ಮ ಎಡತೊಡೆಯ ಚರ್ಮವನ್ನೂ ತೆಗೆದು ಒಂದು ಜೊತೆ ಸುಂದರ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರಿಗೆ ಅರ್ಪಿಸಲು ಮುಂದಾದಾಗ ಬಸವೇಶ್ವರರು ಇದನ್ನು ನೋಡಿ ವಿಸ್ಮಿತರಾಗಿ, ‘ಈ ಪಾದುಕೆಗಳು ಕಾಲಲ್ಲಿ ಮೆಟ್ಟಿಕೊಳ್ಳಲು ಯೋಗ್ಯವಾದಂಥವಲ್ಲ. ಇವುಗಳ ಸ್ಥಾನ ನನ್ನ ಶಿರಸ್ಸು’ ಎಂದು ಹೇಳುತ್ತಾ ಅವುಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಹರಳಯ್ಯ ದಂಪತಿಗಳ ಪ್ರೀತಿ, ಗೌರವ, ತ್ಯಾಗಕ್ಕೆ ಗೌರವ ಸಮರ್ಪಿಸಿದರು. ಇದು ದೀನದಲಿತರಿಗೆ ಬಸವೇಶ್ವರರು ನೀಡುತ್ತಿದ್ದ ಗೌರವದ ಸಂಕೇತವಾಗಿದೆ.

ನಂತರ ಈ ಪಾದುಕೆಗಳನ್ನು ತನಗೇ ಬೇಕು ಎಂದು ಅಹಂಕಾರದಿಂದ ಮೆಟ್ಟಲು ಹೋದ ಮಧುವರಸ ಎಂಬ ವ್ಯಕ್ತಿಗೆ ದೇಹವೆಲ್ಲಾ ಬೆಂಕಿಯಿಂದ ಉರಿದುಹೋದ ಅನುಭವ ಉಂಟಾಗಿ ಅದನ್ನು ಶರಣ ಹರಳಯ್ಯರಿಗೆ ದೈನ್ಯದಿಂದ ಹಿಂದಿರುಗಿಸಿದ ಕಥೆಯನ್ನೂ ಕೆಲವು ಸಾಹಿತ್ಯಗಳು ತಿಳಿಸುತ್ತವೆ.

ಕಲ್ಯಾಣದಲ್ಲಿ ವಿಪ್ಲವ ಉಂಟಾಗಿ ಬಸವಾನುಯಾಯಿ ಶರಣರೆಲ್ಲ ಚದುರಿಹೋಗುತ್ತಿರುವ ಸಮಯದಲ್ಲಿ ಚನ್ನಬಸವಣ್ಣನವರು ಈ ಪಾದರಕ್ಷೆಗಳ ಸಂರಕ್ಷಣೆಯ ಹೊಣೆಯನ್ನು ಗವಿಸಿದ್ದಪ್ಪ ಎಂಬ ಶರಣನಿಗೆ ನೀಡುತ್ತಾರೆ. ಗವಿಸಿದ್ದಪ್ಪ ಅದನ್ನು ಸುರಕ್ಷಿತವಾಗಿ ಕಾಗಿನಿ ನದಿಯ ದಡದಲ್ಲಿರುವ ಬಿಜ್ಜನಹಳ್ಳಿಗೆ ತಂದರು ಎಂದು ಹೇಳಲಾಗುತ್ತದೆ. ಇದಕ್ಕೆ ಒಂದು ಚಿಕ್ಕ ಮಂದಿರವನ್ನು ನಿರ್ಮಿಸಿ ಅದರಲ್ಲಿ ಈ ಪಾದರಕ್ಷೆಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. “ಸೊಲಬ” ಎಂಬ ಹೆಸರಿನ ಮನೆತನದವರಿಂದ ನಿತ್ಯವೂ ಶುಚಿರ್ಭೂತವಾಗಿ ಈ ಪಾದುಕೆಗಳಿಗೆ ಪೂಜೆ ನಡೆಯುತ್ತಿದೆ. ಕೆಲವು ವಿಜ್ಞಾನಿಗಳು ಈ ಪಾದುಕೆಗಳನ್ನು ಪರೀಕ್ಷಿಸಿ, ಈ ಪಾದರಕ್ಷೆಗಳು ಮಾಡಿರುವುದು ಮನುಷ್ಯ ಚರ್ಮದಿಂದಲೇ ಹಾಗೂ ಸುಮಾರು 800 ವರ್ಷಗಳ ಹಿಂದೆ ಎಂದು ಸ್ಪಷ್ಟ ಪಡಿಸಿರುವ ಕುರಿತು ಸ್ಥಳಿಯರು ಹೇಳುತ್ತಾರೆ.

ಶರಣ ಹರಳಯ್ಯನವರು ಲೋಕಕಲ್ಯಾಣಾರ್ಥವಾಗಿ ಹಲವು ಕಡೆ ಸಂಚರಿಸಿ 34 ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಅನುಭವ ಮಂಟಪದ ಚರ್ಚೆಯಲ್ಲಿ ಶರಣ ಹರಳಯ್ಯನವರೂ ಪಾಲ್ಗೊಳ್ಳುತ್ತಿದ್ದರೂ ಎಂಬುದನ್ನು ಹೇಳಲಾಗುತ್ತದೆಯಾದರೂ ಅವರ ವಚನಗಳು ಅತ್ಯಂತ ಕಡಿಮೆ ಲಭ್ಯವಿದೆ.

Reference:

ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ


https://lingayatreligion.com/K/Sharanaru/Haralayya_Kalyanamma.htm

Total Page Visits: 6 - Today Page Visits: 0

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ