• ಜೂನ್ 9, 2020
  • rellowplaques
  • Blogs

ನವೆಂಬರ್ ಬಂದೊಡನೆ ಕನ್ನಡ ನಮಗೆಲ್ಲರಿಗೂ ನೆನಪಾಗಿಬಿಡುತ್ತದೆ. ಆಮೇಲೆ ಸುದೀರ್ಘ, ದಿವ್ಯಮೌನ. ಸಾಫ್ಟ್ವೇರ್ ಕಂಪೆನಿಗಳಲ್ಲಿ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊನೆಗೆ ಯುನಿವರ್ಸಿಟಿಯ ಆವರಣಗಳಲ್ಲೂ ಕನ್ನಡದ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಕನ್ನಡ ಎಂಬುದು ಮೇಲ್ವಲಯಗಳಲ್ಲೂ ಈಗ ಒಪ್ಪಿಕೊಂಡ ಭಾಷೆ. ಬಹುಶಃ ಹಾಗೆ ತುಂಬ ಕನ್ನಡವನ್ನು ಅಪ್ಪಿಕೊಂಡು ಬದುಕುವ ಯತ್ನ ನಡೆಸಲಿಲ್ಲವೆಂದರೆ ನಮ್ಮ ಕಣ್ಣೆದುರಿಗೇ ಅದು ಲುಪ್ತವಾಗಿಹೋದರೂ ಅಚ್ಚರಿ ಪಡಬೇಕಿಲ್ಲ. ಭಾಷಾಪ್ರೇಮ ಮತ್ತು ಭಾಷಾಂಧತೆ ಎರಡೂ ಭಿನ್ನವಾದವೇ. ತನ್ನ ಭಾಷೆಯನ್ನು ತಾನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸುವ ವ್ಯಕ್ತಿತ್ವ ಬಲು ಅಗತ್ಯವಾದ್ದು. ಚಿದಾನಂದಮೂರ್ತಿಗಳು ಇದನ್ನೇ ಸ್ವಾಭಿಮಾನದ ಕನ್ನಡ ಎಂದು ಕರೆಯುತ್ತಾರೆ. ಅವರ ಮಾತಿನಂತೆ ಕನ್ನಡದ ಸಾಮ್ರಾಜ್ಯ ಹುಟ್ಟಿದ್ದೇ ಸ್ವಾಭಿಮಾನದ ನೆಲಕಟ್ಟಿನ ಮೇಲೆ. ಪಲ್ಲವರ ಕಂಚಿಯಲ್ಲಿ ಆದ ಅವಮಾನಕ್ಕೆ ಪ್ರತೀಕಾರ ಬಯಸಿ ಕನ್ನಡದ ಸಾಮ್ರಾಜ್ಯವನ್ನೇ ಹುಟ್ಟುಹಾಕಿದ ಮಯೂರವರ್ಮ, ಅವರ ಈ ಮಾತಿನ ಆಧಾರ. ಹಾಗಂತ ಇದು ಅಲ್ಲಿಗೇ ನಿಲ್ಲಲಿಲ್ಲ. ಪೋರ್ಚುಗೀಸರನ್ನು ಸಮುದ್ರತೀರದಲ್ಲಿ ಅಡ್ಡಗಟ್ಟಿದ ರಾಣಿ ಅಬ್ಬಕ್ಕ ನಾವೆಲ್ಲಾ ಹೆಮ್ಮೆಪಡುವ ಹೆಣ್ಣುಮಗಳು. ಡಾಲ್‌ಹೌಸಿಯ ದತ್ತುಮಕ್ಕಳಿಗೆ ಹಕಿಲ್ಲವೆಂಬ ಕಾನೂನನ್ನು ಧಿಕ್ಕರಿಸಿ, ಥ್ಯಾಕರೆಯೊಂದಿಗೆ ಕಾದಾಡುತ್ತಾ ಅವನನ್ನು ಯಮಪುರಿಗಟ್ಟಿದ ಕಿತ್ತೂರು ಚೆನ್ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರತೀಕವೇ. ಮತ್ತು ಈ ಘಟನೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬ್ರಿಟೀಷರ ವಿರುದ್ಧ ಸಿಡಿದೇಳುವುದಕ್ಕಿಂತಲೂ ಸುಮಾರು ಎರಡೂವರೆ ದಶಕಕ್ಕೂ ಮುನ್ನವೇ ನಡೆದದ್ದು. ಆಕೆಯ ಬಂಟ ಸಂಗೊಳ್ಳಿ ರಾಯಣ್ಣನದು ಅದೇ ಸ್ವಾಭಿಮಾನ. ಹಲಗಲಿಯ ಬೇಡರಾಗಲೀ, ನರಗುಂದದ ಬಾಬಾಸಾಹೇಬರಾಗಲೀ, ತುಘಲಕ್ರನ್ನು ಎದುರಿಸಿ ನಿಂತ ಗಂಡುಗಲಿ ಕುಮಾರರಾಮನೇ ಆಗಲಿ ಕನ್ನಡಿಗರು ಹೆಮ್ಮೆ ಪಡಬಹುದಾದ ವ್ಯಕ್ತಿತ್ವದವರೇ. ವಿಜಯನಗರ ಸಾಮ್ರಾಜ್ಯವೂ ಕೂಡ ಆ ಸ್ವಾಭಿಮಾನದ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದ್ದೇ! ವಿದ್ಯಾರಣ್ಯರಂತಹ ಸಾಧುಗಳ ತಪಸ್ಸು, ಹಕ್ಕಬುಕ್ಕರಂತಹ ವೀರರ ಕ್ಷಾತ್ರ ಬೆರೆತು ರೂಪುಗೊಂಡಿದ್ದು ಸ್ವಾಭಿಮಾನದ ಕನ್ನಡ ಸಾಮ್ರಾಜ್ಯ. ಇಡೀ ದೇಶ ಇಂದಿಗೂ ಹೆಮ್ಮೆ ಪಡಬಹುದಾದ ಮತ್ತು ಸ್ವತಃ ಶಿವಾಜಿಗೂ ಪ್ರೇರಣೆ ನೀಡಿದ ವೈಭವದ ಸಾಮ್ರಾಜ್ಯ ಅದು.

ಈ ಬಗೆಯ ಅನೇಕ ಘಟನೆಗಳನ್ನು ಉಲ್ಲೇಖಿಸಬಹುದಾದರೂ ಆನಂತರ ಕರ್ನಾಟಕವನ್ನು ಕಟ್ಟಿದ ಒಂದಷ್ಟು ಮಹನೀಯರ ಬದುಕನ್ನು ಅರಿಯಲೇಬೇಕಾದ್ದು ಕರ್ತವ್ಯ. ಕರ್ನಾಟಕದ ಕುಲಪುರೋಹಿತರೆನಿಸಿಕೊಂಡ ಆಲೂರು ವೆಂಕಟರಾಯರು ಇತಿಹಾಸದ ಪುಟಗಳನ್ನು ಕೆದಕುತ್ತಾ ತಾಮ್ರಪತ್ರಗಳನ್ನು, ಶಾಸನಗಳನ್ನು ಹುಡುಕಿ, ಅಧ್ಯಯನ ಮಾಡಿ, ಹಳ್ಳಿಗಳಲ್ಲಿ ದೊರೆತ ಹಳೆಯ ನಾಣ್ಯಗಳ ಆಧಾರದ ಮೇಲೆ ಕರ್ನಾಟಕದ ಗಡಿಯನ್ನು ಗುರುತಿಸುವ ಪ್ರಯತ್ನ ಮಾಡದೇ ಹೋಗಿದ್ದರೆ ಅಥವಾ ಆ ನಿಟ್ಟಿನಲ್ಲಿ ಕನ್ನಡಿಗರಿಗೆ ಪ್ರೇರಣೆ ಕೊಡದೇ ಹೋಗಿದ್ದರೆ ಬಹುಶಃ ಈ ರೂಪ ಕಾಣಲಾಗುತ್ತಿರಲಿಲ್ಲವೇನೋ! ಹಗಲೂ-ರಾತ್ರಿ ಕನ್ನಡದ ಏಳಿಗೆಯ ಚಿಂತನೆಯನ್ನೇ ಮಾಡಿದ ಅವರನ್ನು ಬೇಂದ್ರೆಯವರು ಕರ್ನಾಟಕದ ಪ್ರಾಣೋಪಾಸಕ ಎಂದು ಕರೆದದ್ದು ಸೂಕ್ತವೇ ಸರಿ. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಸಿಕ್ಕ ಸಾವರ್ಕರ್, ತಿಲಕರ ಸಹವಾಸ ಅವರನ್ನು ರಾಷ್ಟ್ರೀಯತೆಯ ಮಹಾಪ್ರವಾಹದೆಡೆಗೆ ಎಳೆತಂದದ್ದು ನಿಜವಾದರೂ ಅದಕ್ಕೆ ಕರ್ನಾಟಕ ತೆರೆಯಾಗಿ ಸೇರಿಕೊಳ್ಳಬೇಕೆಂದು ಅವರಿಗೆ ಪ್ರೇರಣೆ ದೊರೆತಿದ್ದು ಹಂಪಿಯ ಅವಶೇಷಗಳನ್ನು ಕಂಡಮೇಲೆಯೇ. ಕರ್ನಾಟಕ ಏಕೀಕರಣಗೊಂಡ ಸಂತಸದ ಸುದ್ದಿ ತಿಳಿದೊಡನೆ ಹಂಪಿಗೆ ಹೋಗಿ ವಿರೂಪಾಕ್ಷನಿಗೆ ತಾವೇ ಪುರೋಹಿತರಾಗಿ ನಿಂತು ಪೂಜೆಗೈದಿದ್ದರಂತೆ ಆಲೂರರು! ಅವರೇ ಆರಂಭಿಸಿದ ಜಯ ಕರ್ನಾಟಕ ಪತ್ರಿಕೆ ಅಂದಿನ ದಿನಗಳಲ್ಲಿ ಕನ್ನಡಿಗರ ಮನೆ-ಮನೆಯನ್ನೂ ಅಲಂಕರಿಸಿತ್ತು. ಅವರ ಪ್ರೇರಣೆಯಿಂದಲೇ ಸಾಹಿತ್ಯ ಪರಿಷತ್ತೂ ಆರಂಭಗೊಂಡದ್ದು. ಅನೇಕ ಕವಿ-ಸಾಹಿತಿಗಳಿಗೆ ವಸ್ತುವನ್ನು ಕೊಟ್ಟು ಬರೆಯಲು ಪ್ರೇರೇಪಣೆ ಕೊಡುತ್ತಿದ್ದವರೂ ಅವರೇ ಅಂತೆ. ಅವರಂತೆ ಮುಂದಿನ ದಿನಗಳಲ್ಲಿ ಹೊಸ ಬರಹಗಾರರಿಗೆ ಬೆನ್ನು ತಟ್ಟಿ ಪ್ರೇರೇಪಿಸುತ್ತಿದ್ದ ಅ.ನ ಕೃಷ್ಣರಾಯರು, ಮಾಸ್ತಿ, ಕನ್ನಡದ ಪುಸ್ತಕಗಳನ್ನು ಮಾರಿ ಕನ್ನಡದ ಸೌಧ ಕಟ್ಟಲು ಜೀವತೇಯ್ದ ಗಳಗನಾಥರು, ಜಿ.ಪಿ ರಾಜರತ್ನಂ ಇವರೆಲ್ಲಾ ಸ್ಮರಿಸಿಕೊಳ್ಳಬೇಕಾದವರೇ. ಇನ್ನು ನವೋದಯದ ಕಾಲದಲ್ಲಿ ಕನ್ನಡಕ್ಕೊಂದು ಹೊಸ ಆವೇಗವನ್ನು ತಂದುಕೊಟ್ಟ ಬಿ‌.ಎಮ್. ಶ್ರೀಯವರಿಂದ ಹಿಡಿದು ಕುವೆಂಪುವರೆಗಿನ ಪರಂಪರೆಯೊಂತು ಅತ್ಯದ್ಭುತವಾದ್ದೇ!

ಕರ್ನಾಟಕ ಸಾಹಿತಿಗಳದ್ದಷ್ಟೇ ಲೋಕವಲ್ಲ. ಇಲ್ಲಿ ವಿಜ್ಞಾನಿಗಳಿದ್ದಾರೆ, ನಾಡು ಬೆಳಗಿದ ವಿಶ್ವೇಶ್ವರಯ್ಯನವರಂತಹ ಇಂಜಿನಿಯರುಗಳಿದ್ದಾರೆ, ಭಾರತಕ್ಕೆ ಅಗತ್ಯಬಿದ್ದಾಗ ಪ್ರತಿಸ್ಪಂದಿಸಿದ ಫೀಲ್ಡ್ ಮಾರ್ಶಲ್ ಕಾರ್ಯಪ್ಪ, ಮಾಣಿಕ್ಷಾರಂಥವರೂ ಇದ್ದಾರೆ. ಇವರೆಲ್ಲರುಗಳ ಒಟ್ಟಾರೆ ಸ್ವರೂಪವೇ ಕರ್ನಾಟಕ. ಹಾಗಂತ ತೀರಾ ಇತ್ತೀಚಿನದ್ದನ್ನು ಮಾತ್ರ ಉಲ್ಲೇಖಿಸಿದ್ದೇವೆಂದುಕೊಳ್ಳಬೇಡಿ. ಇಡೀ ದೇಶದಲ್ಲೇ ವಿಭಿನ್ನವಾದ ಪರಂಪರೆಯನ್ನು ಕಟ್ಟಿಕೊಟ್ಟ ಶರಣರು, ದಾಸಪಂಥದ ಮೂಲಕ ಹೊಸ ಚಿಂತನೆಯನ್ನು ಸಮಾಜಕ್ಕೆ ನೀಡಿದ ದಾಸಶ್ರೇಷ್ಠರು ತಮ್ಮ ಬದುಕಿನಿಂದಲೂ ಜೀವನದಿಂದಲೂ ಜಗತ್ತಿಗೇ ಮಾದರಿ. ಇವರೆಲ್ಲರೂ ನಿಜವಾದ ಕನ್ನಡ ರತ್ನಗಳು.

ಕರ್ನಾಟಕವನ್ನು ಮತ್ತು ಕನ್ನಡವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ಕನ್ನಡಿಗರೀಗ ನಿರ್ವಹಿಸಲೇಬೇಕಿದೆ. ಅಂದಿನಿಂದ ಇಂದಿನವರೆಗೂ ಕರ್ನಾಟಕ ಬಲು ಸಭ್ಯ. ಬಹುಶಃ ಅದು ಮೈಸೂರಿನ ಮಹಾರಾಜರ ಕೊಡುಗೆ ಇರಬೇಕು. ದೇಶ ಮುಂದೊಮ್ಮೆ ಮಾಡುವ ಕೆಲಸವನ್ನು ಮುಂಚಿತವಾಗಿಯೇ ಆಲೋಚಿಸುವ ಸಾಮರ್ಥ್ಯವಿರುವುದು ಬಹುಶಃ ಕರ್ನಾಟಕಕ್ಕೆ ಮಾತ್ರ! ಜಾತಿ-ಮತ-ಪಂಥಗಳ ಮುಂದೊದಗುವ ತಾಕಲಾಟಕ್ಕೆ 12ನೇ ಶತಮಾನದಲ್ಲೇ ಬಸವಾದಿ ಶರಣರು ಉತ್ತರಿಸಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಚೆನ್ನಮ್ಮ ಬ್ರಿಟೀಷರ ವಿರುದ್ಧ ಕತ್ತಿ ಹಿಡಿದು ನಿಂತಿದ್ದಳು. ಆಧ್ಯಾತ್ಮ ಜಗತ್ತಿನಲ್ಲಿ ಎಲ್ಲರಿಗೂ ಬೇಕಾದ ಮಾರ್ಗವನ್ನು ತೋರಲು ಮೂರೂ ಆಚಾರ್ಯರೂ ಕರ್ನಾಟಕವನ್ನೇ ಆರಿಸಿಕೊಂಡಿದ್ದರು. ಪ್ರಜಾಪ್ರತಿನಿಧಿಸಭಾವನ್ನು ಮೈಸೂರು ಮಹಾರಾಜರಷ್ಟು ಚೊಕ್ಕವಾಗಿ ನಡೆಸಿದವರು ಮತ್ತ್ಯಾರೂ ಇಲ್ಲ. ಸ್ವಾತಂತ್ರ್ಯಕ್ಕೂ ಮುನ್ನವೇ ಆಧುನಿಕ ಕೈಗಾರಿಕೆಗಳ ಕುರಿತಂತೆ ಕರ್ನಾಟಕ ಯೋಚನೆ ಮಾಡಿಯಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಇಡಿಯ ದೇಶ ವಿಜ್ಞಾನ ಯಂತ್ರಗಳನ್ನು ಆಮದು ಮಾಡಿಕೊಳ್ಳುವಾಗ ವೈಜ್ಞಾನಿಕ ಸಂಶೋಧನಾ ಕೇಂದ್ರವೊಂದಕ್ಕೆ ಜಮ್‌ಶೆಡ್‌ಜೀ ಟಾಟಾರಿಗೆ ಭೂಮಿಕೊಟ್ಟದ್ದೇ ಕರ್ನಾಟಕ. ಅದೇ ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂದು ಜಾಗತಿಕ ಮಟ್ಟದಲ್ಲಿ ಮೆರೆಯುತ್ತಿರೋದು. ಬಂಗಾಳದ ಜನರ ಓತಪ್ರೋತ ರಾಜ್ಯಭಾವನೆಯಿಂದ ನೊಂದುಬಂದ ಸರ್ ಸಿ.ವಿ ರಾಮನ್‌ರಿಗೂ ಜಾಗಕೊಟ್ಟು ವೆಜ್ಞಾನಿಕ ಸಂಸ್ಥೆಯನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿದ್ದೂ ಕರ್ನಾಟಕವೇ. ಇದು ಮೈಸೂರಿನ ಮಹಾರಾಜರ ದೂರದೃಷ್ಟಿ!

ನಿಸ್ಸಂಶಯವಾಗಿ ನಾವು ಭಾರತದ ಅವಿಭಾಜ್ಯ ಅಂಗ. ಭಾರತದ ಏಳ್ಗೆಯಲ್ಲೇ ಕರ್ನಾಟಕದ ಏಳ್ಗೆಯೂ ಇದೆ. ಅದರೊಂದಿಗೆ ಭಾರತದ ಏಳ್ಗೆಗೆ ನಾವು ಕೊಡಬೇಕಾದ ಕೊಡುಗೆಯೂ ಸಾಕಷ್ಟಿದೆ. ಪ್ರತೀ ಬಾರಿ ರಾಜ್ಯೋತ್ಸವಗಳು ನವೆಂಬರ್ ತಿಂಗಳ ಉತ್ಸವಗಳಷ್ಟೇ ಆಗದೇ ಈ ನಿಟ್ಟಿನಲ್ಲಿ ನಮಗೊಂದಷ್ಟು ಪ್ರೇರಣೆ ಕೊಡುತ್ತದೆ ಎನ್ನುವುದಾದರೆ ನಿಜಕ್ಕೂ ಪ್ರಯತ್ನ ಸಾರ್ಥಕ.

Total Page Visits: 542 - Today Page Visits: 2

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ