• ಜೂನ್ 10, 2020
  • rellowplaques
  • Blogs

ಶ್ರೀ ಕೃಷ್ಣದೇವರಾಯರಿಗೆ ಆತನ ಆಸ್ಥಾನಿಕರಿತ್ತಿದ್ದ, ಪ್ರೀತಿಯುತ ಬಿರುದು,” ಸಾಹಿತ್ಯ ಸಮರಾಂಗಣ ಸಾರ್ವಭೌಮ”. ಅದು ಆತನಿಗೆ ಅನ್ವರ್ಥವಾಗಿತ್ತು. ದಿಗ್ವಿಜಯ ಯಾತ್ರೆಗೆ ಹೊರಡುತ್ತಿದ್ದ ಕೃಷ್ಣದೇವರಾಯರು, ತಮ್ಮೊಂದಿಗೆ ಅಪಾರ ಪ್ರಮಾಣದ ಸೈನ್ಯ, ಸರಕು ಸರಂಜಾಮುಗಳ ಜೊತೆಜೊತೆಗೇ ತಮ್ಮ ಆಸ್ಥಾನ ಕವಿಗಳನ್ನೂ ಕರೆದೊಯ್ಯುತ್ತಿದ್ದುದು ಅವರ ಸಾಹಿತ್ಯಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಕೃಷ್ಣದೇವರಾಯನು ದೀರ್ಘಕಾಲ ಕಳಿಂಗದ ಸಮರಾಂಗಣದಲ್ಲಿ ಪ್ರತಾಪರುದ್ರ ಗಜಪತಿ ರಾಜನೊಡನೆ ಯುದ್ಧ ಹೂಡಿದ್ದ. ಆಗ ಆತನೊಂದಿಗೆ ಅವನ ಆಸ್ಥಾನ ಕವಿಗಳಾಗಿದ್ದ ಅಲ್ಲಸಾನಿ ಪೆದ್ದನ್ನ ನಂದಿ ತಿಮ್ಮಣ್ಣ ಮುಂತಾದವರಿದ್ದರು. ರಣರಂಗದ ದಿನನಿತ್ಯದ ಸೇನಾ ವ್ಯೂಹ ರಚನೆ ,ಹೋರಾಟ ,ರಣತಂತ್ರ, ಸೇನಾ ಚಾಲನೆ ಗಳ ಜೊತೆ ಜೊತೆಗೆ ಶ್ರೀಕೃಷ್ಣದೇವರಾಯರು ರಾತ್ರಿ ,ತಮ್ಮ ಡೇರೆಗಳಲ್ಲಿ ರಣಾಂಗಣದ ಬೆಳದಿಂಗಳಿನಲ್ಲಿ ಕವಿಗೋಷ್ಠಿ ನಡೆಸುತ್ತಿದ್ದುದೊಂದು , ಅಪರೂಪದ ಐತಿಹಾಸಿಕ ವಿಶೇಷ. ರಣಾಂಗಣದ ಭೀಷಣ ವಾತಾವರಣದಲ್ಲಿ ರಾಯರು ಹೀಗೆ ಸರಸ್ವತಿಯ ಆರಾಧನೆ ನಡೆಸುತ್ತಿದ್ದರು.

ಶ್ರೀ ಕೃಷ್ಣದೇವರಾಯ ವಿರಚಿತ ತೆಲುಗಿನ ಪಂಚ ಮಹಾಕಾವ್ಯಗಳಲ್ಲೊಂದೆನಿಸಿದ ” ಅಮುಕ್ತಮಾಲ್ಯದ” ಕೃತಿಯ ಉಗಮವೇ ಒಂದು ರೋಚಕ ಪ್ರಸಂಗ. ಒಂದು ರೀತಿಯಲ್ಲಿ ಕಾವ್ಯ -ಸಾಹಿತ್ಯಗಳೆಂಬುದು ಶ್ರೀಕೃಷ್ಣದೇವರಾಯರ ಮೂಲ ಸ್ವಭಾವದಲ್ಲಿ ಸಮ್ಮಿಳಿತಗೊಂಡಿದ್ದವೆನ್ನಬಹುದೇನೋ .ಯವನರೊಂದಿಗೆ ಸಂಪರ್ಕ ಬೆಳೆಸಿ, ವಿಜಯನಗರದ ಹಿಂದೂ ಸಾಮ್ರಾಜ್ಯಕ್ಕೆ ನಿರಂತರ ಕಿರುಕುಳ ಕೊಡುತ್ತಿದ್ದ ಕಳಿಂಗದ ಪ್ರತಾಪರುದ್ರ ಗಜಪತಿರಾಯನೊಡನೆ ಹಲವು ವರ್ಷಗಳ ಕಾಲ ನಿರಂತರವಾಗಿ ಸಮರಸಂಘರ್ಷವನ್ನು ರಾಯರು ನಡೆಸಿಕೊಂಡು ಬರುತ್ತಿದ್ದ ಕಾಲವದು. ಓರಂಗಲ್ಲನ್ನು ವಶಪಡಿಸಿಕೊಳ್ಳುವ ಸಂಕಲ್ಪದಿಂದ ಸಮೀಪದ ವಿಜಯವಾಡದಲ್ಲಿ ಕೃಷ್ಣದೇವರಾಯರು ತಮ್ಮ ಸೇನಾ ಬಿಡಾರವನ್ನು ಹೂಡಿದ್ದರು .ಮಹಾವಿಷ್ಣು ಭಕ್ತರಾದ ರಾಜರಿಗೆ ಸಮೀಪದ ಶ್ರೀ ವೈಷ್ಣವ ಕ್ಷೇತ್ರ ಶ್ರೀಕಾಕುಲಂಗೆ ಭೇಟಿ ನೀಡಬೇಕೆನಿಸಿತು. ರಾಯರು ತಮ್ಮ ಪತ್ನಿಯರೊಂದಿಗೆ ಆ ಕ್ಷೇತ್ರಕ್ಕೆ ಭೇಟಿ ನೀಡಿದ ದಿನ ಏಕಾದಶಿಯಾಗಿತ್ತು. ಅವರು ಆ ದಿನವಿಡೀ ಉಪವಾಸವಿದ್ದು ರಾತ್ರಿ ಮಲಗಿದ್ದಾಗ, ಕನಸಿನಲ್ಲಿ ಮಹಾವಿಷ್ಣುವು ಲಕ್ಷ್ಮೀದೇವಿ ಸಮೇತನಾಗಿ ದರ್ಶನವಿತ್ತ. ಅಷ್ಟೇ ಅಲ್ಲದೆ ತನ್ನನ್ನು ಭಕ್ತಿಯಿಂದ ಸೇವಿಸಿ ವಿಷ್ಣುಪದ ಸೇರಿದ ಗೋದಾದೇವಿ ಹಾಗೂ ಆಕೆಯ ತಂದೆ ವಿಷ್ಣು ಚಿತ್ತರ ಬಗ್ಗೆ ಕವನ ರಚಿಸಿ ಅದನ್ನು ತನಗೆ ಅರ್ಪಣೆ ಮಾಡುವಂತೆ ತಿಳಿಸಿ ರಾಯರ ಕನಸಿನಿಂದ ವಿಷ್ಣು ಅಂತರ್ಧಾನನಾದ.

ವಿಜಯನಗರದ ಕನ್ನಡದರಸು ಶ್ರೀ ಕೃಷ್ಣದೇವರಾಯನಿಗೆ ಆಂಧ್ರದ ತೆಲುಗು ವಲ್ಲಭನಾದ ಭಗವಾನ್ ಮಹಾವಿಷ್ಣುವು, ತಮಿಳಿನ ಆಳ್ವಾರ್ ಸಂತಳ ಬಗ್ಗೆ ತೆಲುಗಿನಲ್ಲಿ ಕಾವ್ಯ ಬರೆಯುವಂತೆ ಆಜ್ಞಾಪಿಸಿದ್ದೊಂದು ದಿವ್ಯ ಸಂಗತಿಯಾಯಿತು .ಹಾಗೆ ಕೃಷ್ಣದೇವರಾಯನಿಂದ ರಚಿತವಾದ ಕಾವ್ಯವೇ ಅಮುಕ್ತಮಾಲ್ಯದ. ಅದರರ್ಥ, ದೇವರಿಗೆ ಹೂಮಾಲೆಯರ್ಪಿಸುವ ಮೊದಲು ಅದನ್ನು ತಾನೇ ಧರಿಸಿ ನಂತರ ಅರ್ಪಿಸುತ್ತಿದ ಭಕ್ತೆ ಎಂದು. ಆಕೆಯೇ ತಮಿಳ್ನಾಡಿನ ಆಳ್ವಾರ್ ಪರಂಪರೆಯ ಮಹಾನ್ ಸಂತೆ ಗೋದಾದೇವಿ. ಅಳ್ವಾರ್ ಪರಂಪರೆಯಲ್ಲಿ ಪೆರಿಯಾಳ್ವಾರ್ (ಹಿರಿಯ ಆಳ್ವಾರ್) ಎಂದೇ ಪ್ರಸಿದ್ಧರಾದ ವಿಷ್ಣು ಚಿತ್ತನ ಮಗಳು.

ಕಥಾ ವಸ್ತು, ಅಲಂಕಾರ, ಶೈಲಿ ಹಾಗೂ ರಚನೆಗಳ ಶ್ರೀಮಂತಿಕೆಯ ದೃಷ್ಟಿಯಿಂದ ಕೃಷ್ಣದೇವರಾಯರ “ಅಮುಕ್ತಮಾಲ್ಯದ ” ಒಂದು ಅತ್ಯಂತ ಮಹತ್ವದ ಕೃತಿ ಯೆನಿಸಿದೆ . ಸಂಸ್ಕೃತ ಸಾಹಿತ್ಯದಲ್ಲಿ ಪಾಂಡಿತ್ಯ ಪಡೆಯಲು ಅಲ್ಲಿನ ಪಂಚ ಮಹಾಕಾವ್ಯಗಳಾದ ರಘುವಂಶ ,ಕುಮಾರಸಂಭವ, ಮೇಘದೂತ, ಭಾರವಿಯ ಕಿರಾತಾರ್ಜುನೀಯ ಮತ್ತು ಮಾಘನ ಶಿಶುಪಾಲವಧ ಕೃತಿಗಳನ್ನು ಹೇಗೆ ಕಡ್ಡಾಯವಾಗಿ ಅಧ್ಯಯನ ಮಾಡಲೇಬೇಕೋ ಅದೇ ರೀತಿ ತೆಲುಗು ಸಾಹಿತ್ಯದಲ್ಲಿ ಓದಲೇಬೇಕಾದ ಪಂಚಮಹಾ ಕೃತಿಗಳಲ್ಲಿ ರಾಯರ ಅಮುಕ್ತ ಮೌಲ್ಯದವೂ ಒಂದೆನಿಸಿದೆ. ಅವರ ಸಂಸ್ಕೃತ ವಿದ್ವತ್ತು ಅತ್ಯಂತ ಹಿರಿದಾದುದು. ಅಮುಕ್ತಮಾಲ್ಯದ ಕೃತಿರಚನೆಗೆ ಮೊದಲೇ ಆತ ಸಂಸ್ಕೃತದಲ್ಲಿ ಮದಾಲಸ ಚರಿತ,ಸತ್ಯವಧೂಪ್ರೀಣನ, ಸಕಲಕಥಾಸಾರಸಂಗ್ರಹ, ಜ್ನಾನಚಿಂತಾಮಣಿ ಹಾಗೂ ರಸಮಂಜರಿಯಂಥಾ ಅನೇಕ ಕಾವ್ಯಗಳನ್ನು ರಚಿಸಿದ್ದಾರೆ.

ಕೃಷ್ಣದೇವರಾಯರು ತಮ್ಮ ಆಸ್ಥಾನದಲ್ಲಿ ಅನೇಕ ಕವಿಗಳಿಗೆ ಸಾಹಿತಿಗಳಿಗೆ ರಾಜಾಶ್ರಯ ನೀಡಿದ್ದರು. ಶ್ರೀಪಾದರಾಜರ ಶಿಷ್ಯಾಗ್ರಣಿ, ಶ್ರೀ ವ್ಯಾಸರಾಜರು ಇವರ ಗುರುಗಳು . ತೆನಾಲಿ ರಾಮಕೃಷ್ಣ ,ನಂದಿ ತಿಮ್ಮ , ತಿರುಮಲ ತಾತಾಚಾರ್ಯ ರಾಮರಾಜಭೂಷಣರಂಥಾ ಪ್ರಖ್ಯಾತ ಸಾಹಿತಿಗಳಿಂದ ಈತನ ಆಸ್ಥಾನ ಶೋಭಿಸುತ್ತಿತ್ತು. ಅವರಲ್ಲಿ 8 ಪ್ರಮುಖರನ್ನು ಗುರುತಿಸಿ ಅವರಿಗೆ ಸಾಹಿತ್ಯ ವಿಶ್ವದ ಎಂಟು ದಿಕ್ಕುಗಳ ಗಜರೂಪೀ ಆಧಾರಸ್ತಂಭವೋ, ಎಂಬಂತೆ ಅಷ್ಟದಿಗ್ಗಜರೆಂಬ ಬಿರುದು ನೀಡಿ ಗೌರವಿಸಿದ್ದವ ಕೃಷ್ಣದೇವರಾಯ. ತನ್ನ ರಾಜಧಾನಿಯಲ್ಲಿ ಲಲಿತಕಲೆಗಳ ಅಭಿವೃದ್ಧಿಗೋಸ್ಕರ “ಭುವನ ವಿಜಯ” ಎಂಬ ಕಟ್ಟಡ ಕಟ್ಟಿಸಿ , ಅದರಲ್ಲಿ ಕವಿಗೋಷ್ಟಿಯನ್ನೂ ಲಲಿತಕಲೆಗಳ ವಿವಿಧ ಪ್ರಕಾರಗಳನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದವ ಕೃಷ್ಣದೇವರಾಯ. ಈತನದೆಷ್ಟು ವಿದ್ವತ್ ಪಕ್ಷಪಾತಿಯಾಗಿದ್ದನೆಂಬುದಕ್ಕೆ ಸಾಕ್ಷಿ ,ಆತ ತನ್ನ ಆಸ್ಥಾನದ ಅಷ್ಟದಿಗ್ಗಜರಲ್ಲೊಬ್ಬನೆನಿಸಿದ್ದ ಅಲ್ಲಸಾನಿ ಪೆದ್ದನ್ನ ನನ್ನು ನಡೆಸಿಕೊಂಡ ರೀತಿ . “ಹರಿ ಕಥಾ ಸಾರ” ಮತ್ತು “ಮನು ಚರಿತ್ರೆ ” ಎಂಬ ಅದ್ಭುತ ಕೃತರತ್ನಿಗಳನ್ನಿತ್ತವನು ಅಲ್ಲಸಾನಿ ಪೆದ್ದನ್ನ . ಈತನ ಮನುಚರಿತ್ರವನ್ನು ಸರಸ್ವತಿಯ ಚೂಡಾರತ್ನ ವೆಂದು ಕೊಂಡಾಡಲಾಗಿದೆ .ಆ ಸಂದರ್ಭದಲ್ಲಿ ಸನ್ಮಾನಿತನಾದ ಅಲ್ಲಸಾನಿ ಪೆದ್ದನನ ಕಾಲಿಗೆ ಬಂಗಾರದ ಕಡಗ ತೊಡಿಸಿದ ಚಕ್ರವರ್ತಿ ಕೃಷ್ಣದೇವರಾಯನು ಆತನನ್ನು ಪಲ್ಲಕ್ಕಿಯಲ್ಲೇರಿಸಿ ಆಸ್ಥಾನಕವಿಗಳೊಂದಿಗೆ ಅದಕ್ಕೆ ತಾನೂ ಹೆಗಲು ಕೊಟ್ಟು ನಡೆದ. ಆತನ ಸಾಹಿತ್ಯ ಪ್ರೀತಿ ಹಾಗಿತ್ತು.

Total Page Visits: 1007 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ