• ಜೂನ್ 10, 2020
  • rellowplaques
  • Blogs

1908, ಏಪ್ರಿಲ್ 1 ರಂದು ಮಾಗಡಿಯ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಇವರದು ಬಾಲ್ಯದಿಂದಲೂ ಶಿಸ್ತುಬದ್ಧ ಜೀವನ. ತಂದೆ-ತಾಯಿ ಇಟ್ಟ ಹೆಸರು ಶಿವಣ್ಣ. ಶ್ರದ್ಧೆಯಿಂದ ತುಮಕೂರಿನಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಸೇರಿಕೊಳ್ಳಲು ಬೆಂಗಳೂರಿಗೆ ಬಂದರು. ತುಮಕೂರಿನಲ್ಲಿ ಓದುವ ವೇಳೆಗೆ ಅವರಿಗೆ ತುಮಕೂರಿನ ಪ್ರಸಿದ್ಧ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳೊಂದಿಗೆ ಒಡನಾಟವಿತ್ತು.

ಕೆಲವೇ ವರ್ಷಗಳಲ್ಲಿ ಶ್ರೀಗಳನ್ನು ಶಿವಣ್ಣನವರು ತಮ್ಮ ಗುರುಗಳೆಂದು ಕರೆದು, ಅವರೊಂದಿಗೆ ಎಲ್ಲ ವಿಚಾರಗಳನ್ನೂ ಚರ್ಚಿಸುತ್ತಿದ್ದರು. ಅಧ್ಯಾತ್ಮ ಚರ್ಚೆಗಳಲ್ಲಿ ಹೆಚ್ಚು-ಹೆಚ್ಚು ಒಲವು ತೋರುತ್ತಿದ್ದರು ಶಿವಣ್ಣನವರು. ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳು ಅಕಾಲ ಮೃತ್ಯುವಿಗೆ ಈಡಾಗಿದ್ದು. ಶಿವಣ್ಣನವರ ಶಿಸ್ತುಬದ್ಧ, ಅಧ್ಯಾತ್ಮ ಮನೋವೃತ್ತಿಯನ್ನರಿತಿದ್ದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳಿಗೆ ಅವರನ್ನೇ ತಮ್ಮ ಮಠದ ಮುಂದಿನ ಮಠಾಧಿಪತಿಯನ್ನಾಗಿ ಆಯ್ಕೆ ಮಾಡಿದರು. 1930 ರಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದ ಶಿವಣ್ಣ ಶ್ರೀ ಶಿವಕುಮಾರ ಸ್ವಾಮಿಗಳಾದರು. ಪ್ರತಿನಿತ್ಯ ಅವರ ದಿನಚರಿ ಪ್ರಾರಂಭವಾಗುತ್ತಿದ್ದುದೇ ಬೆಳಿಗ್ಗೆ 4 ಗಂಟೆಗೆ. ಸ್ನಾನದ ನಂತರ ಪೂಜೆ-ಧ್ಯಾನಗಳಲ್ಲಿ ತಲ್ಲೀನರಾಗುತ್ತಿದ್ದರು. ಅವರದೊಂದು ಅಪರೂಪದ ವ್ಯಕ್ತಿತ್ವ.

ಶ್ರೀಗಳು ತ್ರಿವಿಧ ದಾಸೋಹಿ, ಅಂದರೆ ಅನ್ನ, ಅಕ್ಷರ, ಜ್ಞಾನ ಮೂರು ತತ್ತ್ವದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟ ಸಿದ್ಧಗಂಗಾ ಶ್ರೀಗಳು ಮಠವನ್ನು ಸದಾ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುವಂತೆ ಮಾಡಿದರು. ಸಿದ್ಧಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆಲ್ಲಾ ಪೋಷಕ ಸ್ಥಾನದಲ್ಲಿ, ಗುರು ಸ್ಥಾನದಲ್ಲಿ ನಿಂತು ಸಲಹಿದವರು ಶ್ರೀಗಳು. ಪ್ರತಿನಿತ್ಯ ಮಕ್ಕಳ ಪ್ರಾರ್ಥನೆ ಸಮಯದಲ್ಲಿ ಶ್ರೀಗಳು ಪಾಲ್ಗೊಳಗಳುತ್ತಿದ್ದುದು ಅಚ್ಚರಿಯೇ ಸರಿ. ಮಠದಲ್ಲಿ ಸದಾ ನಿತ್ಯ ದಾಸೋಹವಿರುತ್ತದೆ. ಶ್ರೀಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಬೆಳಕಿನ ಮಾರ್ಗ ಅರಸಿ ಬಂದ ಭಕ್ತರಿಗೆ ದಾರಿ ತೋರಿಸಿದ ಶ್ರೇಷ್ಠ ಜೀವನ ಶ್ರೀ ಶಿವಕುಮಾರ ಶ್ರೀಗಳದ್ದಾಗಿತ್ತು.

ಶ್ರೀಗಳು ಆಸ್ಪತ್ರೆಗೆ ಸೇರುವ ಮುಂಚಿನವರೆಗೂ ಪ್ರತಿನಿತ್ಯ ಭಕ್ತರಿಗೆ ದರ್ಶನಕ್ಕಾಗಿ ಹಲವು ಗಂಟೆಗಳವರೆಗೆ ತಮ್ಮ ಆಸನದಲ್ಲಿ ಕುಳಿತೇ ಇರುತ್ತಿದ್ದರು. ಬಂದ ಭಕ್ತರ ಕುಶಲೋಪರಿಯನ್ನು ಕೇಳುವುದು, ಅವರಿಗೆ ಪ್ರಸಾದ ಸ್ವೀಕರಿಸಿಯೇ ತೆರಳುವಂತೆ ಕೇಳಿಕೊಳ್ಳುವುದನ್ನು ಅವರು ಎಂದೂ ನಿಲ್ಲಿಸಲಿಲ್ಲ. ಕಾಯಕವೇ ಕೈಲಾಸ ಎಂದು ಕೇವಲ ಮಾತಿನಲ್ಲಿ ಹೇಳದೇ ಮಾಡಿ ತೋರಿಸಿದವರು ಪರಮಪೂಜ್ಯ ಶ್ರೀ ಶಿವಕುಮಾರು ಶ್ರೀಗಳು! 2007ರಲ್ಲಿ ಶ್ರೀಗಳಿಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನೂ, 2015 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಪಿತ್ತಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳನ್ನು ಕೃತಕ ಉಸಿರಾಟದಡಿಯಲ್ಲಿ ಇಡಲಾಗಿತ್ತು. ಬಾಹ್ಯಪ್ರಜ್ಞೆ ಇಲ್ಲದೇ ಹೋದಾಗಲೂ ಶ್ರೀಗಳ ಬಳಿ ಭಸ್ಮವನ್ನು ಹಿಡಿದ ತಕ್ಷಣ ಅವರದನ್ನು ಹಣೆಗೆ ಹಚ್ಚಿಕೊಂಡಿದ್ದ ವಿಡಿಯೊ ಒಂದು ವಾರದ ಕೆಳಗೆ ವೈರಲ್ ಆಗಿತ್ತು. ಅವರ ಆಂತರಿಕ ಶಕ್ತಿಗೇ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅವರ ಆರೋಗ್ಯ ಸುಧಾರಣೆಗೆ ಇಡಿಯ ಜಗತ್ತು ಪ್ರಾರ್ಥಿಸಿತ್ತು. ಹಲವರ ಬದುಕಿಗೆ ಬೆಳಕಾಗಿ ನಿಂತ, ಆದರ್ಶ ಜೀವನ ನಡೆಸಿದ ಪರಮಪೂಜ್ಯ ಡಾ|| ಶ್ರೀ ಶಿವಕುಮಾರ ಸ್ವಾಮಿಗಳಿಗೆ ಶತಶತ ನಮನ!!

Total Page Visits: 1645 - Today Page Visits: 2

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ