• ಜೂನ್ 21, 2020
  • rellowplaques
  • Blogs

ಕಳೆದ ಸಾವಿರಾರು ವರ್ಷಗಳಿಂದ ಭಾರತೀಯರು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕಂಡುಕೊಂಡ ಬಗೆಯೇ ಯೋಗ. ಯೋಗ ಎನ್ನೋದು ಸಂಸ್ಕೃತ ಯುಜ್ ಧಾತುವಿನಿಂದ ಹೊರಬಂದ ಪದ. ಯೋಗವೆಂದರೆ ಸಮತ್ವವನ್ನು ಕಾಪಾಡಿಕೊಳ್ಳುವುದು. ಪತಂಜಲಿ ಯೋಗಸೂತ್ರದಲ್ಲಿ ಮನಸ್ಸಿನ ಏರಿಳಿತಗಳನ್ನು ಶಾಂತಗೊಳಿಸಿಕೊಳ್ಳುವುದನ್ನು ಯೋಗವೆಂದು ಕರೆದಿದ್ದಾರೆ. ಯೋಗವೆಂದರೆ ಕೇವಲ ಆಸನವಲ್ಲ. ಪ್ರಾಣಾಯಾಮ, ಧ್ಯಾನ, ಧಾರಣ, ಹೀಗೆ ಎಲ್ಲವನ್ನೂ ಯೋಗವೆನ್ನುತ್ತಾರೆ.

ಈಗ ಯೋಗವನ್ನು ಇಡಿಯ ವಿಶ್ವ ಅಪ್ಪಿಕೊಂಡಿದೆ. ಅದರಿಂದಾಗುವ ಲಾಭಗಳನ್ನು ಸಂಶೋಧನೆಯ ಮೂಲಕ ಕಂಡುಕೊಂಡ ವಿಶ್ವದ ಪ್ರಮುಖ ರಾಷ್ಟ್ರಗಳ ಜನರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಗುರುತಿಸುವ ಭಾರತದ ಮಾತಿಗೆ ಇಡಿಯ ವಿಶ್ವ ತಲೆದೋಗಿತು. ಇದೀಗ ಜಗತ್ತಿನ 190ಕ್ಕೂ ಹೆಚ್ಚು ರಾಷ್ಟ್ರಗಳು ಯೋಗ ದಿನವನ್ನು ಪ್ರಥಮ ಸೂರ್ಯನ ಕಿರಣಕ್ಕೆ ನಮಸ್ಕರಿಸುವ ಮೂಲಕ ಆಚರಿಸುತ್ತಾರೆ ಎಂಬುದು ಹೆಮ್ಮೆಯ ಸಂಗತಿ!

ಭಾರತದಲ್ಲಿ ಹೀಗೆ ಯೋಗದಲ್ಲಿ ಸಾಧನೆ ಮಾಡಿದವರು ಸಾವಿರಾರು ಮಂದಿ ಇದ್ದಾರೆ. ಇಲ್ಲಿ ಯೋಗ ಜೀವನದ ಪದ್ಧತಿಯೇ ಆಗಿದೆ. ಹೀಗೆ ಯೋಗದಲ್ಲಿ ಅಪೂರ್ವ ಸಾಧನೆ ಮಾಡಿದವರಲ್ಲಿ ಕರ್ನಾಟಕದ ಶ್ರೀ ತಿರುಮಲೆ ಕೃಷ್ಣಮಾಚಾರ್ಯ ಅವರು ಅಗ್ರಣಿಗಳಾಗಿ ನಿಲ್ಲುತ್ತಾರೆ. ನವ ಯೋಗದ ಪಿತಾಮಹ ಎಂದೇ ಇವರನ್ನು ಕರೆಯಲಾಗುತ್ತದೆ. ನಾವೀಗ ಕಲಿಯುವ ಯೋಗದ ಬಹುಪಾಲುನ್ನು ವ್ಯವಸ್ಥಿತಗೊಳಿಸಿದವರು ಇವರೇ. ತಿರುಮಲೆ ಕೃಷ್ಣಮಾಚಾರ್ಯರು ಕರ್ನಾಟಕದ ಚಿತ್ರದುರ್ಗದವರು ಎಂಬುದು ಕನ್ನಡನಾಡಿಗೇ ಹೆಮ್ಮೆಯ ಸಂಗತಿ. 20ನೇ ಶತಮಾನದ ಪ್ರಭಾವಿ ಯೋಗ ಗುರುಗಳಲ್ಲಿ ಕೃಷ್ಣಮಾಚಾರ್ಯರು ಅಗ್ರಣಿಯಾಗಿ ನಿಲ್ಲುತ್ತಾರೆ. ಮೈಸೂರಿನ ಮಹಾರಾಜರು ಕೃಷ್ಣಮಾಚಾರ್ಯರ ಯೋಗದಿಂದ ಪ್ರಭಾವಿತರಾದದ್ದಲ್ಲದೇ ತಮ್ಮ ಕುಟುಂಬಕ್ಕೆ ಯೋಗ ಗುರುವಾಗಬೇಕೆಂದು ಕೇಳಿಕೊಂಡರು. ಅದರಂತೆ ಕೃಷ್ಣಮಾಚಾರ್ಯರು ಮೈಸೂರು ಅರಮನೆಯಲ್ಲಿ ಯೋಗ ತರಬೇತಿ ಮಾಡುತ್ತಿದ್ದರು. ಯೋಗಾಚಾರ್ಯ ಎಂದೇ ಗುರುತಿಸಲ್ಪಡುವ ಬಿಕೆಎಸ್ ಐಯ್ಯಂಗಾರ್ ಅವರು ಇವರ ಶಿಷ್ಯರೇ! ಕೃಷ್ಣಮಾಚಾರ್ಯರು ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯಕ್ಕನುಸಾರವಾಗಿ ಆತನಿಗೆ ಅವಶ್ಯಕವಿರುವ ಯೋಗವನ್ನು ಹೇಳಿಕೊಡುತ್ತಿದ್ದರು. ಈ ರೀತಿಯ ವೈಯಕ್ತಿಕ ವಿಧಾನವನ್ನು ವಿನಿಯೋಗ ಅಥವಾ ವಿನ್ಯಾಸ ಎಂದೇ ಕರೆದು ಯೋಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕೀರ್ತಿ ಕೃಷ್ಣಮಾಚಾರ್ಯರದ್ದು! ಯೋಗದ ಜೊತೆ-ಜೊತೆಗೆ ಆಯುರ್ವೇದವನ್ನೂ ಅಭ್ಯಾಸ ಮಾಡಿದ್ದ ಕೃಷ್ಣಮಾಚಾರ್ಯರು ಹಲವರಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ. 100 ವರ್ಷಗಳ ತುಂಬು ಜೀವನ ನಡೆಸಿದ ಕೃಷ್ಣಮಾಚಾರ್ಯರು ಸಾವಿರಾರು ಜನರಿಗೆ ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಳ್ಳಲು ಪ್ರೇರಣಾಸ್ರೋತವಾಗಿ ನಿಂತರು!

ತಿರುಕ ಎಂದೇ ಇಂದಿಗೂ ಖ್ಯಾತವಾಗಿರುವ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಯವರದ್ದು ಅಪರೂಪ ಯೋಗ ಜೀವನ ಎಂದೇ ಹೇಳಬಹುದು. ಮಲ್ಲಾಡಿಹಳ್ಳಿ ಚಿತ್ರದುರ್ಗದ ಹೊಳಲ್ಕೆರೆಯ ಬಳಿಯಿರುವ ಸ್ಥಳ. ಬಾಲ್ಯದಲ್ಲಿಯೇ ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಲಾಡಿಹಳ್ಳಿ ರಾಘವೇಂದ್ರರಿಗೆ ಆರೋಗ್ಯ ಸುಧಾರಿಸಿದ್ದು ಯೋಗದ ಮೂಲಕವೇ! ಹಠ ಯೋಗ, ಪ್ರಾಣಾಯಾಮ, ಹಲವು ಆಸನಗಳನ್ನು ಅಭ್ಯಸಿಸಿದರು. ಯೋಗದಲ್ಲಿಯೇ ಸಾಧನೆ ಮಾಡುತ್ತ ಅನಾಥ ಸೇವಾಶ್ರಮ ಟ್ರಸ್ಟ್ ಎಂಬ ಸಂಸ್ಥೆಯನ್ನೇ ಸ್ಥಾಪಿಸಿದರು. ತಮ್ಮ ಸಂಸ್ಥೆಯ ಮೂಲಕ ದೇಶ-ವಿದೇಶಗಳ ಸುಮಾರು 45 ಲಕ್ಷ ಜನರಿಗೆ ಯೋಗ ತರಬೇತಿಯನ್ನು ನೀಡಿದ ಅಪೂರ್ವ ಸಾಧನೆ ಇವರದ್ದು. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಹಲವು ಸನ್ಮಾನಗಳನ್ನು ನೀಡುವುದಾಗಿ ಹೇಳಿದರು ಅವುಗಳನ್ನೇ ತಿರಸ್ಕರಿಸಿ ಯೋಗಿಯ ಜೀವನ ನಡೆಸಿದವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ!

ಯೋಗದಲ್ಲಿ ಅಪೂರ್ವ ಸಾಧನೆಗೈದಿದ್ದ ಮತ್ತೊಬ್ಬ ಕರ್ನಾಟಕದ ವ್ಯಕ್ತಿ ಡಾ. ರಾಜಕುಮಾರ್. ಹೌದು ನಟಸಾರ್ವಭೌಮ ಡಾ. ರಾಜಕುಮಾರ್ ಅವರು ಕೇವಲ ನಟನೆಂದು ಮಾತ್ರವೇ ದೇಶಾದ್ಯಂತ ಪರಿಚಿತರಾದವರು. ಆದರೆ, ಆತ ಯೋಗಿಯೇ ಆಗಿದ್ದರು ಎಂಬುದನ್ನು ಹಲವರು ಅರಿಯರು. ಐವತ್ತರ ಆಸುಪಾಸಿನಲ್ಲಿ ಯೋಗದತ್ತ ಮರಳಿದ ರಾಜ್ ಕುಮಾರ್ ಅವರು ದಿನಕ್ಕೆ ಐದಾರು ಗಂಟೆ ಯೋಗಾಭ್ಯಾಸ ಮಾಡುತ್ತಿದ್ದರಂತೆ! ಅವರ ಯೋಗಾಭ್ಯಾಸದ ಕುರಿತು ಮಾಹಿತಿ ಹೊರಬಂದದ್ದು ಚಲನಚಿತ್ರವೊಂದರ ಚಿತ್ರೀಕರಣದ ಸಂದರ್ಭದಲ್ಲಿ. ಮುಂಜಾನೆ ಮರುಗಟ್ಟುವ ಚಳಿಯಲ್ಲೂ ಬೆಟ್ಟಗಳ ಮೇಲೆ ನಿಂತು ಯೋಗಾಸನವನ್ನು ಮಾಡಿದ್ದನ್ನು ಕಂಡಿದ್ದ ಚಿತ್ರದ ನಿರ್ದೇಶಕರು, ಛಾಯಾಚಿತ್ರಗಾರರು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವರು ದಂಗಾಗಿದ್ದರು! ಹುಬ್ಬಳ್ಳಿಯ ಸಿದ್ಧಾರೂಢ ಮಠದ ನಾಯ್ಕರ್ ಎನ್ನುವವರ ಬಳಿ ಯೋಗಾಭ್ಯಾಸ ಮಾಡುತ್ತಿದ್ದ ರಾಜ್ ಕುಮಾರ್ ಅವರು ಬೆಳಿಗ್ಗೆ 2.15ಕ್ಕೆ ಏಳುತ್ತಿದ್ದರಂತೆ. 8 ಗಂಟೆಯವರೆಗೆ ಯೋಗಾಸನವನ್ನು ಮಾಡುತ್ತಿದ್ದರಂತೆ! ಪರಕಾಯ ಪ್ರವೇಶ, ಅತೀದ್ರಿಯ ಜ್ಞಾನ ಇವೆಲ್ಲವನ್ನೂ ಅನುಭವಿಸುವ ಹಂಬಲ ಅವರಿಗಿತ್ತು ಎಂಬುದನ್ನು ನಾಯ್ಕರ್ ಅವರೇ ಮುಂದೆ ಹೇಳಿಕೊಂಡಿದ್ದಾರೆ. ನಾಯ್ಕರ್ ಅವರ ಪ್ರಕಾರ ರಾಜ್ ಕುಮಾರ್ ಅವರು ಏಳು ಬಾರಿ ದೇಹವನ್ನು ಬಿಟ್ಟು ಹೋಗಿದ್ದರು ಮತ್ತು ಎಂಟನೇ ಬಾರಿ ಅವರೇ ದೇವರಲ್ಲಿ ಮತ್ತೆ ಹಿಂದಿರುಗಿ ಬಾರದಂತೆ ಮಾಡಬೇಕೆಂದು ಕೇಳಿಕೊಂಡಿದ್ದರಂತೆ! ವೀರಪ್ಪನ್ ರಾಜ್ ಕುಮಾರರನ್ನು ಅಪಹರಿಸಿದ್ದಾಗಲೂ ಕಾಡಿನಲ್ಲಿ ಯೋಗಾಭ್ಯಾಸವನ್ನು ಒಂದು ದಿನವೂ ಬಿಡಲಿಲ್ಲವೆಂದು ಹೇಳಲಾಗುತ್ತದೆ. 50ರ ನಂತರವೂ ಸಿನಿಮಾಗಳಲ್ಲಿ ನಾಯಕ ನಟನಾಗಿ ಪಾತ್ರ ಮಾಡುತ್ತಿದ್ದ ರಾಜ್ ಕುಮಾರರಿಗೆ ಯೋಗವೇ ಶಕ್ತಿ ತುಂಬುತ್ತಿತ್ತು ಎನ್ನುತ್ತಾರೆ.

Reference:

https://en.m.wikipedia.org/wiki/Tirumalai_Krishnamacharya

https://en.m.wikipedia.org/wiki/Malladihalli_Raghavendra

https://newsable.asianetnews.com/south/rajkumar-world-yoga-day-yogi

Total Page Visits: 2156 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ