ಕೆಲವರು ತಮ್ಮ ಜೀವನದುದ್ದಕ್ಕೂ ಸಾಧನೆ ಮಾಡಿ ಯಾರೂ ಮರೆಯಲಾರದಂತಹ ಕುರುಹನ್ನು ಬಿಟ್ಟು ಹೋಗುತ್ತಾರೆ. ಬಿಕೆಎಸ್ ಐಯ್ಯಂಗಾರ್ ಅಂಥದ್ದೇ ಒಬ್ಬ ಅದ್ಭುತ ವ್ಯಕ್ತಿ. ಬಿಕೆಎಸ್ ಐಯ್ಯಂಗಾರ್ ಅವರು ಕರ್ನಾಟಕದ ಹೆಮ್ಮೆ. ಜಗತ್ತಿನಾದ್ಯಂತ ಯೋಗದ ಮೂಲಕ ಭಾರತದ ಗೌರವವನ್ನು ಎತ್ತಿಹಿಡಿದ ಇವರು ನಮ್ಮ ಕೋಲಾರದ ಬೆಳ್ಳೂರಿನವರು. ಇದು ಅವರು ವಾಸವಿದ್ದ ಸ್ಥಳ! ತಮ್ಮ ಹುಟ್ಟೂರಾದ ಬೆಳ್ಳೂರಿಗೆ ಬಂದಾಗ ಇದೇ ಮನೆಯಲ್ಲಿ ಒಂದೆರಡು ದಿನಗಳು, ವಾರಗಳ ಕಾಲವಿದ್ದು ಹೋಗುತ್ತಿದ್ದರು. ತಮ್ಮ ಜೀವನದ ಕೊನೆಯ ಘಳಿಗೆಗಳಲ್ಲಿ ಆಗಾಗ ಬಂದು ಒಂದು ತಿಂಗಳುಗಳ ಕಾಲ ಇಲ್ಲೇ ತಂಗುತ್ತಿದ್ದರು!

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಅವರು ಡಿಸೆಂಬರ್ 14, 1918 ರಂದು ಕೋಲಾರದ ಬೆಳ್ಳೂರಿನಲ್ಲಿ ಜನಿಸಿದರು. ಇವರ ಜನನದ ಸಮಯದಲ್ಲಿ ತಾಯಿ ಶೇಷಮ್ಮ ಅನಾರೋಗ್ಯವಿದ್ದ ಕಾರಣವೋ ಏನೋ ಬಿಕೆಎಸ್ ಅವರು ಅನಾರೋಗ್ಯದ ಮೂಟೆಯನ್ನೇ ಹೊತ್ತು ಹುಟ್ಟಿದರು. ಕೈಕಾಲುಗಳು ತೆಳ್ಳಗೆ ಸ್ವಾಧೀನವಿಲ್ಲದೇ ಇದ್ದವು, ಕುತ್ತಿಗೆಯನ್ನು ಮೇಲೆತ್ತಲೂ ಹರಸಾಹಸ ಪಡಬೇಕಾಗಿತ್ತು ಎಂಬುದನ್ನು ಮುಂದೆ ಬಿಕೆಎಸ್ ಅವರೇ ಹೇಳಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಕೋಲಾರದಲ್ಲಿ ಎಲ್ಲೆಡೆ ಸ್ಪಾನಿಷ್ ಫ್ಲೂ ಕೂಡ ಹರಡಿತ್ತು. ಇವರದು ಬಡ ಕುಟುಂಬ. ತಂದೆ ಕೃಷ್ಣಮಾಚಾರ್ ಶಾಲೆಯ ಶಿಕ್ಷಕರಾಗಿದ್ದರು. ಇಡಿಯ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಬಿಕೆಎಸ್ ರಿಗೆ 9 ವರ್ಷವಿರುವಾಗಲೇ ದುರದೃಷ್ಟವೋ ಎಂಬಂತೆ ಅವರ ತಂದೆ ತೀರಿಕೊಂಡರು! ಬಿಕೆಎಸ್ ರಿಗೆ 16 ವರ್ಷವಾದಾಗ ಇವರ ಸಂಬಂಧಿ ಶ್ರೀ ತಿರುಮಲೆ ಕೃಷ್ಣಮಾಚಾರ್ಯ ಅವರು ಇವರನ್ನು ಮೈಸೂರಿಗೆ ಆಹ್ವಾನಿಸಿದರು. ಅಲ್ಲಿ ಯೋಗಾಭ್ಯಾಸದ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಯೋಚನೆಯನ್ನು ಬಿಕೆಎಸ್ ಅವರಿಗೆ ನೀಡಿದ್ದಲ್ಲದೇ, ತಾವೇ ಗುರುವಾಗಿ ಒಂದಷ್ಟು ಆಸನಗಳನ್ನು ಕಲಿಸಿಕೊಟ್ಟರು. ಇದು ತಮ್ಮ ಜೀವನದ ದಿಕ್ಕು ಬದಲಾಯಿಸಿದ ಸಮಯ ಎಂದು ಬಿಕೆಎಸ್ ಅವರೇ ವರ್ಣಿಸಿದ್ದಾರೆ. ಎರಡು ವರ್ಷಗಳ ನಂತರ ಬಿಕೆಎಸ್ ಅವರು ಗುರು ಕೃಷ್ಣಮಾಚಾರ್ಯರ ಆದೇಶದಂತೆ ಪುಣೆಗೆ ಯೋಗದ ತರಬೇತಿ, ಪ್ರಚಾರ ಕಾರ್ಯಗಳಿಗೆ ಹೋದರು. ಆ ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಯೋಗಾಭ್ಯಾಸವನ್ನು ಮಾಡುತ್ತಿದ್ದರಂತೆ ಬಿಕೆಎಸ್ ಅವರು. ಕೆಲವೇ ವರ್ಷಗಳಲ್ಲಿ ಪ್ರತೀ ಆಸನದ ಆಳ, ವಿಸ್ತಾರವನ್ನು ಅರಿತು ಅದ್ಭುತ ಯೋಗ ಶಿಕ್ಷಕರಾಗಿ ಹೊರಹೊಮ್ಮಿದರು ಬಿಕೆಎಸ್. ಖ್ಯಾತ ದಾರ್ಶನಿಕರಾದ ಜಿಡ್ಡು ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಸೇರಿದಂತೆ ಹಲವರು ಇವರ ಬಳಿ ಯೋಗಾಭ್ಯಾಸ ತರಬೇತಿ ಪಡೆದಿದ್ದಾರೆ.

ಅಮೇರಿಕಾ ಮೂಲದ ಪ್ರಖ್ಯಾತ ವಯೋಲಿನ್ ವಾದಕ ಯೆಹುದಿ ಮೆನುಹಿನ್ ಅವರನ್ನು 1952ರಲ್ಲಿ ಪುಣೆಯಲ್ಲಿ ಐಯ್ಯಂಗಾರ್ ಅವರು ಭೇಟಿಯಾದರು. ಕೆಲವೇ ಗಂಟೆಗಳ ಭೇಟಿಯಲ್ಲಿ ಮೆನುಹಿನ್ ರನ್ನು ಯೋಗದತ್ತ ಸೆಳೆದ ಬಿಕೆಎಸ್ ರ ಸಾಧನೆಯನ್ನು ಮೆಚ್ಚಲೇಬೇಕು. ಇಲ್ಲಿಂದ ಬಿಕೆಎಸ್ ರ ಅಂತರರಾಷ್ಟ್ರೀಯ ಪ್ರಯಾಣ ಪ್ರಾರಂಭವಾಯ್ತು. ಯೋಗವನ್ನು ಜಗತ್ತಿನಾದ್ಯಂತ ತಲುಪಿಸುವ ಅವರ ಕೆಲಸ ನಿಲ್ಲದಂತೆ ಸಾಗಿತು. ವಿದೇಶಗಳಲ್ಲಿ ಯೋಗದ ತರಗತಿಗಳನ್ನು, ಭಾಷಣಗಳನ್ನು ತೆಗೆದುಕೊಂಡರು. ತಮ್ಮ ಯೋಗ ಪದ್ಧತಿಯನ್ನು ಐಯ್ಯಂಗಾರ್ ಯೋಗ ಪದ್ಧತಿ ಎಂದೇ ಕರೆದರು.

1966ರಲ್ಲಿ ಬಿಕೆಎಸ್ ಅವರು ತಮ್ಮ ಮೊದಲ ಪುಸ್ತಕ ‘ಲೈಟ್ ಆನ್ ಯೋಗ’ ವನ್ನು ಹೊರತಂದರು. ಇದು ಜಗತ್ತಿನ 22 ಭಾಷೆಗೆ ಅನುವಾದಿತಗೊಂಡಿದೆ. 1975ರ ಹೊತ್ತಿಗೆ ತಮ್ಮದೇ ಸ್ವಂತ ಯೋಗ ಸಂಸ್ಥೆ ರಾಮಮಣಿ ಐಯ್ಯಂಗಾರ್ ಮೆಮೊರಿಯಲ್ ಯೋಗ ಇನ್ಸ್ಟಿಟ್ಯೂಟ್ ಅನ್ನು ತೆರೆದರು. ರಾಮಮಣಿ ಬಿಕೆಎಸ್ ರ ಪತ್ನಿಯ ಹೆಸರು. 1973ರಲ್ಲಿ ಇವರ ಪತ್ನಿ ಅಕಾಲಿಕ ಮರಣಹೊಂದಿದ್ದರು. 1984ರವರೆಗೆ ಯೋಗ ತರಬೇತಿ ನೀಡುತ್ತಿದ್ದ ಬಿಕೆಎಸ್ ಅವರು ಅಧಿಕೃತವಾಗಿ ಯೋಗ ತರಬೇತಿ ನೀಡುವುದನ್ನು ನಿಲ್ಲಿಸಿದರು. ಆದರೂ ಕೆಲವು ವಿಶೇಷ ತರಗತಿಗಳು, ಭಾಷಣಗಳು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ಬಿಕೆಎಸ್.

ತಮ್ಮ 90ರ ಆಸುಪಾಸಿನಲ್ಲೂ ಬಿಕೆಎಸ್ ಅವರು ಮಾಸ್ಕೊ, ಚೀನಾಗಳಲ್ಲಿ ಯೋಗದ ದೊಡ್ಡ ವೇದಿಕೆಗಳಲ್ಲಿ ತರಬೇತಿ ನೀಡಿದ, ಭಾಷಣ ಮಾಡಿದ ಸಾಧನೆ ಬಿಕೆಎಸ್ ರದ್ದು! ಯೋಗ, ಪ್ರಾಣಾಯಾಮ, ಜೀವನದ ಕುರಿತು ಬಿಕೆಎಸ್ ಅವರು ಬರೆದ ಪುಸ್ತಕಗಳು ಇವು: Light on Pranayama, The Art of Yoga, The Tree of Yoga, Light on the Yoga Sutras of Patanjali, Light on Life: The Yoga Journey to Wholeness, Inner Peace, and Ultimate Freedom, Yoga: The Path to Holistic Health, Astadala Yogamala: Collected Works (8 vols), Yoga Wisdom and Practice, Yaugika Manas: Know and Realize the Yogic Mind, Core of the Yoga Sutras: The Definitive Guide to the Philosophy of Yoga.

ಇವರ ಸಾಧನೆಯನ್ನು ಗುರುತಿಸಿ ಭಾರತ ಇವರಿಗೆ 1991ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಬಿಕೆಎಸ್ ಅವರು 95 ವರ್ಷಗಳ ತುಂಬು ಜೀವನ ನಡೆಸಿ 20 ಆಗಸ್ಟ್ 2014ರಲ್ಲಿ ಕೊನೆಯುಸಿರೆಳೆದರು.

Total Page Visits: 1618 - Today Page Visits: 2

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ