• ಜುಲೈ 10, 2020
  • rellowplaques
  • Writers

‘ಸಣ್ಣ ಕತೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕೋಲಾರದ ಮಾಲೂರಿನ ಮಾಸ್ತಿ (ಹೊಂಗೇನಹಳ್ಳಿ) ಗ್ರಾಮದಲ್ಲಿ ಜನಿಸಿದರು. ಇದು ಅವರು ಹುಟ್ಟಿ, ಕೆಲವು ವರ್ಷಗಳ ಕಾಲ ಬಾಲ್ಯವನ್ನು ಕಳೆದ ಮನೆ. ಈಗ ಈ ಮನೆಯನ್ನೇ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಹಲವು ಪುಸ್ತಕಗಳನ್ನು ಕಾಣಬಹುದು. ಈ ಗ್ರಂಥಾಲಯದಲ್ಲಿ ವಿಶೇಷವಾಗಿ ಸಿಇಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.

ಮಾಸ್ತಿಯವರು ಜೂನ್ 8, 1891ರಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ ಜನಿಸಿದರು. ಬಡತನದಲ್ಲಿ ಬೆಳೆದ ಇವರ ಪ್ರಾಥಮಿಕ ವಿದ್ಯಾಭ್ಯಾಸವು ಹೊಂಗೇನಹಳ್ಳಿಯ ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜಪೇಟೆಗಳಲ್ಲಿ ನಡೆಯಿತು. ಪ್ರೌಢಶಿಕ್ಷಣವನ್ನು ಮೈಸೂರಿನ ವೆಸ್ಲಿಯನ್ ಶಾಲೆಯಲ್ಲಿ ಪಡೆದು, ಮಹಾರಾಜ ಕಾಲೇಜಿನಿಂದ ಪ್ರಥಮ ದರ್ಜೆಯಲ್ಲಿ ಎಫ್.ಎ ಪದವಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ ಮತ್ತು ಎಂ.ಸಿ.ಎಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ (ಇಂಗ್ಲಿಷ್) ಪದವಿ ಪಡೆದು, ಅದೇ ಕಾಲೇಜಿನಲ್ಲಿ ಕೆಲವು ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ಮಾಸ್ತಿಯವರು. ಮೈಸೂರಿನಲ್ಲಿ ಸಿವಿಲ್ ಸರ್ವೀಸ್ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ 1914 ರಲ್ಲಿ ಅಸಿಸ್ಟೆಂಟ್ ಕಮಿಷನರ್ ಆದರು. ಬಡ್ತಿ ಪಡೆದು ಜಿಲ್ಲಾ ಕಲೆಕ್ಟರ್ ಆಗಿ ಕೆಲಸ ಮಾಡಿದ ಮಾಸ್ತಿಯವರು ನಿವೃತ್ತಿ ಆಗುವ ವೇಳೆಗೆ ಅಬಕಾರಿ ಕಮೀಷನರ್ ಕೂಡಾ ಆಗಿದ್ದರು. ಇಷ್ಟೆಲ್ಲಾ ಜವಾಬ್ದಾರಿ ನಿರ್ವಹಿಸುತ್ತಲೇ ಕನ್ನಡದ ಸೇವೆ ಮಾಡಿದ ಮಾಸ್ತಿಯವರು ಕಾಲೇಜು ಓದುತ್ತಿರುವಾಗಲೇ ಕತೆಗಳನ್ನು ಬರೆಯಲು ಪ್ರಾರಂಭಿಸಿದರು.

‘ಶ್ರೀನಿವಾಸ” ಎಂಬ ಕಾವ್ಯನಾಮದಡಿ ಬರೆಯುತ್ತಿದ್ದ ಮಾಸ್ತಿಯವರ ಮೊದಲನೇ ಕತೆ ‘ರಂಗನ ಮದುವೆ’. ಮಾಸ್ತಿಯವರ ಮನೆ ಮಾತು ತಮಿಳು ಆದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಅದ್ಭುತ ಸೇವೆಯನ್ನು ಕಂಡು ಕರ್ನಾಟಕ ಅವರನ್ನು ‘ಕನ್ನಡದ ಆಸ್ತಿ’ ಎಂದೇ ಪರಿಗಣಿಸಿದೆ. ಸಣ್ಣ ಕತೆಗಳಲ್ಲಿಯೇ ವಿಶೇಷ ಕೃಷಿ ಮಾಡಿದ ಇವರನ್ನು ‘ಕರ್ನಾಟಕ ಕಥಾ ಬ್ರಹ್ಮ’ ಎಂದೂ, ‘ಕತೆಗಾರರ ಅಣ್ಣ’ ಎಂದೂ ಜನ ಈಗಲೂ ಕರೆಯುತ್ತಾರೆ.

ರಂಗನ ಮದುವೆ, ಮಾತುಗಾರ ಮಲ್ಲಣ್ಣ, ಮಾಸ್ತಿಯವರು ರಚಿಸಿದ ಸಣ್ಣ ಕತೆಗಳು. ಬಿನ್ನಹ, ಮನವಿ, ಅರುಣ, ತಾವರೆ, ಸಂಕ್ರಾಂತಿ, ಹೀಗೆ ಹಲವು ಕಾವ್ಯ ಸಂಕಲನಗಳನ್ನು ರಚಿಸಿದ್ದಾರೆ. ರವೀಂದ್ರನಾಥ ಠಾಕೂರ್ ಮತ್ತು ಶ್ರೀ ರಾಮಕೃಷ್ಣರ ಜೀವನ ಚರಿತ್ರೆಯನ್ನೂ ಬರೆದಿದ್ದಾರೆ. ಹಲವು ನಾಟಕಗಳನ್ನು, ಎರಡು ಕಾದಂಬರಿಗಳನ್ನು ಕನ್ನಡದಲ್ಲಿ ರಚಿಸಿದ ಕೀರ್ತಿ ಇವರದ್ದು. ಅವರ ಆತ್ಮಕಥೆ ‘ಭಾವ’ ಸೇರಿದಂತೆ, ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ಸುಮಾರು 123. ಇದು ಮಾಸ್ತಿಯವರು ಕನ್ನಡಕ್ಕೆ ನೀಡಿರುವ ಸಾಹಿತ್ಯದ ಆಸ್ತಿ.

‘ಜೀವನ’ ಎಂಬ ಮಾಸ ಪತ್ರಿಕೆಯನ್ನೂ ತಮ್ಮದೇ ಸಂಪಾದಕೀಯತ್ವದಲ್ಲಿ 21 ವರ್ಷಗಳ ಕಾಲ ನಡೆಸಿರುವ ಮಾಸ್ತಿಯವರು ಗದ್ಯ-ಪದ್ಯ ಎಲ್ಲದರಲ್ಲೂ ಎತ್ತಿದ ಕೈ. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮದ್ರಾಸು ಸಾಹಿತ್ಯ ಸಮ್ಮೇಳನ, ಮುಂಬಯಿ ಅಖಿಲ ಭಾರತ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದನ್ನು 1942ರಲ್ಲಿ ನೀಡಿ ಗೌರವಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ. ಅವರ ಚಿಕವೀರ ರಾಜೇಂದ್ರ ಕೃತಿಗೆ ದೊರೆತ ಜ್ಞಾನಪೀಠ ಪ್ರಶಸ್ತಿಯು ಕನ್ನಡಕ್ಕೆ ನಾಲ್ಕನೆಯ ಜ್ಞಾನಪೀಠ ಪ್ರಶಸ್ತಿಯಾಗಿದೆ.

ಮಾಸ್ತಿ ಊರಿನಲ್ಲಿ ಒಂದು ಗ್ರಂಥಾಲಯ ಹಾಗೂ ಹೊಂಗೇನಹಳ್ಳಿಯಲ್ಲಿ ಪುಸ್ತಕ ಸಂಗ್ರಹಾಲಯವನ್ನು ಸ್ವತಃ ಮಾಸ್ತಿಯವರೇ ಸ್ಥಾಪಿಸಿದ್ದು. ಸುಮಾರು ಏಳು ದಶಕಗಳ ಕಾಲ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಾಸ್ತಿಯವರು 1986, ಜೂನ್ 6 ರಂದು ತಮ್ಮ ಇಹಲೋಕ ತ್ಯಜಿಸಿದರು.

Reference:
https://en.wikipedia.org/wiki/Masti_Venkatesha_Iyengar
https://kannadasahithyaparishattu.in/?p=437
https://youtu.be/WWudGZKXPhA


Total Page Visits: 3661 - Today Page Visits: 6

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ