• ಜನವರಿ 7, 2021
  • rellowplaques
  • History

ನೂರು ವರ್ಷಗಳಿಗೂ ಮುನ್ನ ಮೈಸೂರು ಮಹಾರಾಜರ ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ ಮುದ್ರಣಾಲಯ, ಬೆಂಗಳೂರು ಮುದ್ರಣಾಲಯ. ಕ್ಯಾಲೆಂಡರ್ ಎಂದೊಡನೆ ಕರ್ನಾಟಕದ ಜನತೆಗೆ ನೆನಪಾಗೋದು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳೇ. ಈ ಮುದ್ರಣಾಲಯದ ಇತಿಹಾಸ ಅಷ್ಟೇ ರೋಚಕವಾಗಿದೆ.

ಮೈಸೂರಿನ ಪ್ರಖ್ಯಾತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಮದುವೆ 1900ರಲ್ಲಿ ನಡೆಯಿತು. ಅದರ ಲಗ್ನ ಪತ್ರಿಕೆಯನ್ನು ಲಂಡನ್ ನಲ್ಲಿ ಮುದ್ರಿಸಬೇಕಾಗಿ ಬಂದದ್ದು ಮತ್ತು ಅದಕ್ಕೆ ತಗಲಿದ ವೆಚ್ಚವನ್ನು ಕಂಡು ಮಹಾರಾಜರು ಕರ್ನಾಟಕದಲ್ಲಿಯೇ ಒಂದು ಮುದ್ರಣಾಲಯವನ್ನು ಪ್ರಾರಂಭಿಸುವ ಆಲೋಚನೆ ಮಾಡಿದ್ದರಂತೆ. ಆದರೆ, ಅದು ಕಾರ್ಯರೂಪಕ್ಕೆ ಬಂದದ್ದು ಸರ್.ಎಂ ವಿಶ್ವೇಶ್ವರಯ್ಯನವರು ದಿವಾನರಾದ ನಂತರವೇ.

ಸರ್.ಎಂ ವಿಶ್ವೇಶ್ವರಯ್ಯನವರಿಗೆ ಈ ಆಲೋಚನೆ ತಲೆಗೆ ಕೂತದ್ದೇ ತಡ, 1914ರಲ್ಲಿ ಲಂಡನ್ ಗೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ರಾಯಲ್ ಪ್ರೆಸ್ ಜೊತೆ ಮಾತುಕತೆ ನಡೆಸಿ ಭಾರತಕ್ಕೆ ಮುದ್ರಣ ಯಂತ್ರವನ್ನು ತರಿಸಿಯೇಬಿಟ್ಟರು. ಮೈಸೂರು ರಾಜರ ಸಹಕಾರದೊಂದಿಗೆ ಸರ್.ಎಂ ವಿಯವರು ಬೆಂಗಳೂರಿನ ಶಂಕರಪುರಂನಲ್ಲಿದ್ದ ಕೃಷ್ಣಮೂರ್ತಿ ಎಂಬುವವರ ಮನೆಯಲ್ಲಿ 1915ರ ಸಪ್ಟೆಂಬರ್ ನಲ್ಲಿ ಮುದ್ರಣಾಲಯವನ್ನು ಪ್ರಾರಂಭಿಸಿದರಾದರೂ, ಅದು ಅಧಿಕೃತವಾಗಿ ನೋಂದಣಿಯಾಗಿದ್ದು ಆಗಸ್ಟ್ 15, 1916ರಂದು.

ಸರ್.ಎಂ.ವಿಯವರ ಕನಸಿದ್ದುದು ಈ ಮುದ್ರಣಾಲಯದಿಂದ ಕ್ಯಾಲೆಂಡರ್ ಅನ್ನು ಹೊರತರಬೇಕೆನ್ನುವುದು. 1921ರಲ್ಲಿ ತಮ್ಮ ಸ್ನೇಹಿತ ಪುಟ್ಟಯ್ಯನವರ ಸಹಾಯದಿಂದ ಮೊದಲ ಇಂಗ್ಲಿಷ್ ಕ್ಯಾಲೆಂಡರ್ ಅನ್ನು ಹೊರತರಲಾಯಿತು. ನಂತರ ಕನ್ನಡದ ಕ್ಯಾಲೆಂಡರ್ ಬೇಕು ಎಂದು ಬೇಡಿಕೆ ಇಟ್ಟು, ಅದನ್ನು ವಿನ್ಯಾಸಗೊಳಿಸುವಲ್ಲಿಯೂ ಸಹಕರಿಸಿದವರು ಶ್ರೇಷ್ಠ ಸಾಹಿತಿ ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು. 1936ರಲ್ಲಿ ಪ್ರಕಟವಾದ ಮೊದಲ ಕನ್ನಡ ಕ್ಯಾಲೆಂಡರ್ ಗೆ ಅಡಕವನ್ನೂ ಬರೆದುಕೊಟ್ಟವರು ಇವರೇ.

ಮೊದಮೊದಲು ಇದು ಮೈಸೂರು ಸಂಸ್ಥಾನದ ಅಧಿಕೃತ ಮುದ್ರಣಾಲಯವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ, ಆ ಸಂದರ್ಭದಲ್ಲಿ ಕ್ಯಾಲೆಂಡರ್ ನ ನಾಲ್ಕೂ ದಿಕ್ಕುಗಳಲ್ಲಿ ಮೈಸೂರರಸರ ಭಾವಚಿತ್ರಗಳನ್ನು ಪ್ರಕಟಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಅಲ್ಲಿ ರಾರಾಜಿಸತೊಡಗಿದವು.

1960ರಲ್ಲಿ ಈ ಕ್ಯಾಲೆಂಡರ್ ಗಳಿಗೆ ಹೊಸ ವಿನ್ಯಾಸ ನೀಡಲಾಯಿತು. ಬರಬರುತ್ತಾ ಕಾಲಕ್ಕೆ ತಕ್ಕಂತೆ ಟೇಬಲ್ ಟಾಪ್ ಕ್ಯಾಲೆಂಡರ್ ಗಳು, ಮೊಬೈಲ್ ಆ್ಯಪ್ ಗಳನ್ನು ಬೆಂಗಳೂರು ಮುದ್ರಣಾಲಯ ಹೊರತಂದಿತು.

ಒಂದು ಶತಮಾನದಿಂದ ವಿವಿಧ ಕ್ಯಾಲೆಂಡರ್ ಗಳು, ಲಗ್ನ ಪತ್ರಿಕೆಗಳು, ಮುಂತಾದವನ್ನು ಬೆಂಗಳೂರು ಮುದ್ರಣಾಲಯ ಕರ್ನಾಟಕದ ಜನತೆಗೆ ನೀಡುತ್ತಾ ಬಂದಿದೆ.

Total Page Visits: 249 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ