• ಮಾರ್ಚ್ 11, 2021
  • rellowplaques
  • Blogs

ದಕ್ಷಿಣದ ಕಾಶಿ, ಭೂಕೈಲಾಸ ಎಂಬೆಲ್ಲಾ ಖ್ಯಾತವಾಗಿರುವ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ತ್ರಿಸ್ಥಲ ಕ್ಷೇತ್ರವೆಂದು ಕರೆಯಲ್ಪಡುವ ಮೂರು ಕ್ಷೇತ್ರಗಳಲ್ಲಿ ಕನರ್ಾಟಕದ ಗೋಕರ್ಣವೂ ಒಂದು. ಗೋವಿನ ಕರ್ಣದ ಆಕಾರದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಗೋಕರ್ಣವೆಂಬ ಹೆಸರು ಬಂತೆಂದು ಹೇಳಲಾಗುತ್ತದೆ.
ಗೋಕರ್ಣದ ಮಹಾಬಲೇಶ್ವರ ದೇವಾಲಯ ಪೌರಾಣಿಕ ಹಿನ್ನೆಲೆಯುಳ್ಳದ್ದು. ಬ್ರಹ್ಮಾಂಡ ಪುರಾಣದ ಪ್ರಕಾರ ಗೋಕರ್ಣ ಪರುಶರಾಮನಿಂದ ನಿರ್ಮಿತವಾದ ಸ್ಥಳ. ಹಾಗಾಗಿ ಪರಶುರಾಮ ಕ್ಷೇತ್ರವೆಂದೂ ಇದಕ್ಕೆ ಹೆಸರು.

ರಾವಣನ ತಾಯಿ ಕೈಕಸೆ ಪರಮ ಶಿವಭಕ್ತೆ. ಆಕೆ ಮರಳಿನ ಲಿಂಗವನ್ನು ಮಾಡಿ ಪೂಜೆಗೈಯ್ಯುವ ಸಂದರ್ಭದಲ್ಲಿ ಸಮುದ್ರದ ನೀರು ಲಿಂಗವನ್ನು ಕೊಚ್ಚಿಕೊಂಡು ಹೋಗುವುದನ್ನು ಕಂಡು ದುಃಖಿಸಿದ್ದಳು. ಆಗ ರಾವಣ ಶಿವನಿಂದ ಸಾಕ್ಷಾತ್ ಆತ್ಮಲಿಂಗವನ್ನೇ ತನ್ನ ತಾಯಿಗೆ ತಂದೊಪ್ಪಿಸುವ ಶಪಥಗೈಯ್ಯುತ್ತಾನೆ. ಅತ್ಯಂತ ಕಠಿಣ ತಪಸ್ಸಿನ ನಂತರವೂ ಶಿವ ಒಲಿಯದೇ ಹೋದಾಗ ರಾವಣ ತನ್ನ ತಲೆಯನ್ನೇ ಕಡಿದುಕೊಂಡು, ಬುರುಡೆಯನ್ನು ಮಾಡಿ, ತನ್ನ ದೇಹದ ನಾಳಗಳಿಂದ ತಂತಿಯನ್ನು ತಯಾರಿಸಿ ಸಾಮಗಾನದಿಂದ ಶಿವನನ್ನು ಅರ್ಚಿಸುತ್ತಾನೆ. ಇದರಿಂದ ಸಂಪ್ರೀತನಾದ ಶಿವ ಪ್ರತ್ಯಕ್ಷಗೊಂಡು ಬೇಕಾದ ವರವನ್ನು ಕೇಳಿಕೊಳ್ಳುವಂತೆ ರಾವಣನಿಗೆ ಹೇಳುತ್ತಾನೆ.

ಶಿವ ಪ್ರತಿನಿತ್ಯ ಅರ್ಚಿಸುವ ಆತ್ಮಲಿಂಗವನ್ನೇ ನೀಡುವಂತೆ ಕೇಳಿಕೊಳ್ಳುತ್ತಾನೆ ರಾವಣ. ಶಿವ ಇಲ್ಲವೆನ್ನುವುದಿಲ್ಲ. ಆದರೆ, ಅದನ್ನು ಭೂಮಿಯ ಮೇಲಿಟ್ಟರೆ ಅದರಲ್ಲಿರುವ ಶಕ್ತಿ ನಶಿಸಿಹೋಗಿ, ಅದೊಂದು ಸಾಮಾನ್ಯ ಕಲ್ಲಾಗುತ್ತದೆಂಬ ಎಚ್ಚರಿಕೆಯನ್ನೂ ಕೊಡುತ್ತಾನೆ. ಈ ವಿಷಯ ದೇವತೆಗಳಿಗೆ ಮುಟ್ಟಿ ಭಯದಿಂದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಶಿವನ ಮಗನಾದ ಗಣಪತಿಯನ್ನು ಮೊರೆಹೋಗುವಂತೆ ಕೇಳಿಕೊಳ್ಳುತ್ತಾನೆ. ದೇವತೆಗಳ ಪ್ರಾರ್ಥನೆಗೆ ಒಪ್ಪಿ ಗಣಪತಿ ವಟುವಿನ ವೇಷಧರಿಸಿ ರಾವಣ ನಡೆದು ಬರುತ್ತಿರುವೆಡೆಗೆ ಸಾಗುತ್ತಾನೆ. ಆ ವೇಳೆಗೆ ವಿಷ್ಣುವು ಸೂರ್ಯನನ್ನು ಮರೆಮಾಚಿ ಸಂಧ್ಯಾಕಾಲವಾಗುವಂತೆ ಮಾಡುತ್ತಾನೆ. ರಾವಣನಿಗೀಗ ಸಂಕಟ. ಸಂಧ್ಯಾವಂಧನೆ ಮಾಡಬೇಕು ಆದರೆ ಆತ್ಮಲಿಂಗವನ್ನು ಕೆಳಗಿಡುವಂತಿಲ್ಲ. ಆಗ ಅಲ್ಲಿಯೇ ವಟುವಿನ ವೇಷದಲ್ಲಿದ್ದ ಗಣಪತಿಯನ್ನು ಕಂಡು ಆತ್ಮಲಿಂಗವನ್ನು ಕೆಳಗಿಡದೆಯೇ ಹಿಡಿಸದುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಗಣಪತಿ ಬಲು ಬುದ್ಧಿವಂತಿಕೆಯಿಂದ ತಾನು ರಾವಣ ಎಂದು ಮೂರು ಬಾರಿ ಕರೆಯುವುದಾಗಿಯೂ, ಮೂರನೇ ಬಾರಿಯೂ ಹಿಂದಿರುಗದಿದ್ದರೆ ಆತ್ಮಲಿಂಗವನ್ನು ಕೆಳಗಿಡುವುದಾಗಿಯೂ ಹೇಳುತ್ತಾನೆ. ರಾವಣ ಅದಕ್ಕೊಪ್ಪಿ ಸಂಧ್ಯಾವಂಧನೆ ಮಾಡಲು ಹೋಗುತ್ತಾನೆ. ಮೂರು ಬಾರಿ ಕರೆದಾಗಲೂ ರಾವಣ ಬಾರದೇ ಇದ್ದಾಗ ಗಣಪತಿ ಅದನ್ನು ಅಲ್ಲಿಯೇ ಭೂಮಿಯ ಮೇಲೆ ಇಟ್ಟುಬಿಡುತ್ತಾನೆ. ಹೀಗೆ ಗಣಪತಿ ಇಟ್ಟ ಆತ್ಮಲಿಂಗವಿರುವ ಸ್ಥಳವೇ ಗೋಕರ್ಣದ ಮಹಾಬಲೇಶ್ವರ ದೇವಾಲಯ.

ರಾವಣ ಹಿಂದಿರುಗಿ ಬಂದು ಕೋಪಗ್ರಸ್ಥನಾಗಿ ಆ ಲಿಂಗವನ್ನು ತೆಗೆಯಲು ಹೋಗಿ ಸೋಲುತ್ತಾನೆ. ಸಿಟ್ಟಿನಿಂದ ಲಿಂಗದ ಮೇಲೆ ಗುದ್ದುತ್ತಾ, ಅದರ ಕಣವನ್ನು ತೆಗೆದು ನಾಲ್ಕು ದಿಕ್ಕಿಗೆ ರಾವಣ ಎಸೆಯುತ್ತಾನೆ. ಈ ನಾಲ್ಕು ಕ್ಷೇತ್ರಗಳೇ ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಮುರುಡೇಶ್ವರವೆಂದು ಹೆಸರುವಾಸಿಯಾದ ಕ್ಷೇತ್ರಗಳು. ಹೀಗೆ ಆತ್ಮಲಿಂಗವನ್ನು ಹೊಂದಿದ ಈ ಕ್ಷೇತ್ರಗಳೇ ಪಂಚಕ್ಷೇತ್ರಗಳೆಂದು ಪ್ರಸಿದ್ಧಿ ಪಡೆದಿವೆ. ಗೋಕರ್ಣದಲ್ಲಿ ನೆಲೆಯೂರಿದ ಆತ್ಮಲಿಂಗದ ದರ್ಶನಕ್ಕೆ ಸಾಕ್ಷಾತ್ ಶಿವನೇ ಬಂದಿದ್ದನೆಂಬ ಪ್ರತೀತಿ ಇದೆ.
ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವನ್ನು ಕದಂಬ ರಾಜವಂಶದ ಮಯೂರವರ್ಮ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ವಿಜಯನಗರದ ಆಳ್ವಿಕೆಯ ಕಾಲದಲ್ಲಿ ವಿಜಯನಗರದ ಅರಸರು, ನಂತರ ಕೆಳದಿಯ ಚೆನ್ನಮ್ಮ ಮೊದಲಾದವರು ಈ ಕ್ಷೇತ್ರವನ್ನು ಆಗಿಂದಾಗ್ಯೆ ಅಭಿವೃದ್ಧಿಗೊಳಿಸಿದ್ದಾರೆ. ಗೋಕರ್ಣದಲ್ಲಿ ಕೋಟಿತೀರ್ಥವೆಂಬ ಪವಿತ್ರ ಕಲ್ಯಾಣಿ ಇದೆ. 40 ವರ್ಷಕ್ಕೊಮ್ಮೆ ಇಲ್ಲಿನ ಆತ್ಮಲಿಂಗಕ್ಕೆ ಅಷ್ಟಕುಂಭಾಭಿಷೇಕ ನಡೆಯುತ್ತದೆ.

Total Page Visits: 303 - Today Page Visits: 1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ