• ಮಾರ್ಚ್ 13, 2021
  • rellowplaques
  • Blogs

26/11, ಅಂದ ತಕ್ಷಣ ಈಗಲೂ ಒಮ್ಮೆ ಭಾರತೀಯರ ಹೃದಯ ಜೋರಾಗಿ ಹೊಡೆದುಕೊಳ್ಳತ್ತೆ. ಅದು 2008ರ ಮುಂಬೈನ ಭಯಾನಕ ದೃಶ್ಯಗಳನ್ನು ಕಣ್ಮುಂದೆ ಹಾದುಹೋಗುವಂತೆ ಮಾಡುತ್ತದೆ. ಎಂದಿನಂತೆ 26ರ ಸಂಜೆಯೂ ಕೂಡ ಮುಂಬೈನ ರಸ್ತೆಗಳು ಗಿಜಿಗುಡುತ್ತಿದ್ದವು, ರೈಲ್ವೆಸ್ಟೇಷನ್ನು ಜನಜಂಗುಳಿಯಿಂದ ಕೂಡಿತ್ತು, ಹೊಟೆಲ್ಗಳು ದೇಶ-ವಿದೇಶಗಳಿಂದ ಬಂದ ಜನರಿಂದ ತುಂಬಿತ್ತು. ಇವರ ನಡುವೆಯೇ ಲಷ್ಕರ್-ಎ-ತೊಯ್ಬಾದ 10 ಜನ ಭಯೋತ್ಪಾದಕರು ಅಡಗಿ ಕುಳಿತಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಈ ಭಯೋತ್ಪಾದಕರು ಮುಂಬೈ ನಗರದಲ್ಲಿ 12 ಕಡೆ ದಾಳಿಯನ್ನು ಯೋಜಿಸಿದ್ದರು. ಕೆಲವೇ ಗಂಟೆಗಳಲ್ಲಿ ಮುಂಬೈ ರಕ್ತದ ಮಡುವಿನಲ್ಲಿ ಮುಳುಗಿತ್ತು. ಮುಂಬೈನ ಪ್ರತಿಷ್ಠಿತ ತಾಜ್ ಹೊಟೆಲ್ನಲ್ಲಿ ಅಡಗಿ ಕುಳಿತ ಭಯೋತ್ಪಾದಕರು ಹೊಟೆಲ್ನಲ್ಲಿದ್ದವರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು. ದಾಳಿಯಲ್ಲಿ ಮುಂಬೈನ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾದ ಹೇಮಂತ್ ಕರ್ಕರೆಯವರು ಅಸುನೀಗಿದ್ದ ಸುದ್ದಿ ಹೊರಬಂತು. ಈ ವೇಳೆಗೆ ಸೈನ್ಯದ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ನ ಸ್ಪೆಷಲ್ ಆ್ಯಕ್ಷನ್ ಗ್ರೂಪ್ ಪ್ರತಿದಾಳಿ ನಡೆಸಲು ಯೋಜನೆ ರೂಪಿಸಿತು. ಭಯೋತ್ಪಾದಕರನ್ನು ಮಟ್ಟಹಾಕುವ ಈ ಆಪರೇಷನ್ ಬ್ಲಾಕ್ ಟಾರ್ನಡೊಗೆ ಮುಖ್ಯಸ್ಥನಾಗಿ ಹೋಗಿ, ಭಯೋತ್ಪಾದಕರ ಕಪಿಮುಷ್ಠಿಯಿಂದ ಕೊನೆಯ ವ್ಯಕ್ತಿ ಸುರಕ್ಷಿತವಾಗಿ ಹೊರಬರುವವರೆಗೂ ಕಾದಡಿದ್ದು ಮೇಜರ್ ಸಂದೀಪ್ ಉನ್ನಿಕೃಷ್ಣನ್.

ಮೇಜರ್ ಸಂದೀಪ್ ಉನ್ನಿಕೃಷ್ಣನ್ 1977ರ ಮಾರ್ಚ್ 15ರಂದು ಕೇರಳದ ಕೋಜಿಕೋಡ್ನಲ್ಲಿ ಜನಿಸಿದ್ದು. ಕೆ. ಉನ್ನಿಕೃಷ್ಣನ್ ಮತ್ತು ಧನಲಕ್ಷ್ಮಿ ಉನ್ನಿಕೃಷ್ಣನ್ ದಂಪತಿಗಳಿಗೆ ಈತನೊಬ್ಬನೇ ಮಗ. ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನಿಕೃಷ್ಣನ್ರವರು ಬೆಂಗಳೂರಿಗೆ ವರ್ಗಾವಣೆಗೊಂಡರು. ಸಂದೀಪ್ ಉನ್ನಿಕೃಷ್ಣನ್ ಓದಿದ್ದು ಬೆಂಗಳೂರಿನಲ್ಲೇ. ಶಾಲೆಗೆ ಹೋಗುವ ದಿನಗಳಿಂದಲೂ ಸೈನ್ಯಕ್ಕೆ ಸೇರಬೇಕೆಂಬ ಕನಸು ಆತನದ್ದು. ಆಟ-ಪಾಠ ಎರಡರಲ್ಲೂ ಅತ್ಯಂತ ಚುರುಕು ಹುಡುಗ ಅಂತ ಶಾಲೆಯಲ್ಲಿ ಹೆಸರಾಗಿದ್ದವ ಸಂದೀಪ್. ದ್ವಿತೀಯ ಪಿಯುಸಿ ಮುಗಿದ ನಂತರ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸೈನ್ಯದ ಪ್ರವೇಶ ಪರೀಕ್ಷೆಯನ್ನು ಎದುರಿಸಿದ. ಮನೆಯಲ್ಲಿ ತಂದೆ-ತಾಯಿಗೆ ತನ್ನ ಕನಸಿನ ಕುರಿತು ಹೇಳಿದ್ದು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಂತರವೇ!

ಹಠ ಹಿಡಿದು, ತಂದೆ-ತಾಯಿಯರನ್ನು ಒಪ್ಪಿಸಿ 1995ರಲ್ಲಿ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿಕೊಂಡ ಸಂದೀಪ್, ‘ನಾನು ಇತರರಂತೆ ಸಾಮಾನ್ಯನಾಗಿ ಸಾಯಲು ಇಚ್ಛಿಸುವುದಿಲ್ಲ. ನಾನು ಸತ್ತಾಗ ಇಡಿಯ ದೇಶ ನನ್ನನ್ನು ನೆನಪಿಸಿಕೊಳ್ಳುತ್ತದೆ’ ಎಂದು ತನ್ನ ತಂದೆಗೆ ಹೇಳಿದ್ದರಂತೆ. ಇತರರ ಸಹಾಯಕ್ಕೆ ಧಾವಿಸುವಲ್ಲಿ ಸಂದೀಪ್ ಸದಾ ಮುಂದು. ಮಹಾರಾಷ್ಟ್ರದಲ್ಲಿ ತರಬೇತಿಯ ಭಾಗವಾಗಿ ಶಿವಾಜಿಯ ಸಿಂಹಘಡದ ಕೋಟೆಯನ್ನು ಹತ್ತಬೇಕಾಗಿತ್ತಂತೆ. ಸೈನ್ಯದ ತರಬೇತಿಗೆ ಬಂದವರ ತಂಡದಲ್ಲಿ ಮೊದಲು ಕೋಟೆಯನ್ನು ಹತ್ತಿದ್ದು ಸಂದೀಪ್. ‘ಕೋಟೆ ಏರಿದ ನಮ್ಮೆಲ್ಲರಿಗೂ ನೀರಡಿಕೆಯಾಗಿತ್ತು. ಸಂದೀಪ್ ಮೊದಲು ಬಾವಿಯ ಬಳಿ ಹೋಗಿ ನೀರನ್ನು ಹೊರತೆಗೆದ, ಅಷ್ಟರಲ್ಲಿ ಪ್ರವಾಸಿಗರೊಬ್ಬರು ತಮ್ಮ ಬಾಟಲ್ ಅನ್ನು ಹಿಡಿದರು. ಅವರಿಗೆ ನೀರುಕೊಟ್ಟ ನಂತರ, ಮತ್ತೊಬ್ಬ ಪ್ರವಾಸಿಗರು ಬಂದರು. ಅವರಿಗೂ ನೀರು ಕೊಟ್ಟ. ಕ್ಷಣಾರ್ಧದಲ್ಲಿ ದೊಡ್ಡ ಸಾಲೇ ಅಲ್ಲಿ ಸೇರಿತು. ಅಷ್ಟು ಬಾಯಾರಿಕೆಯಾದಾಗಲೂ ತಾನು ಒಂದು ಹನಿ ಕುಡಿಯದೇ ನಗುನಗುತ್ತಲೇ ಅಲ್ಲಿದ್ದವರಿಗೆಲ್ಲಾ ನೀರು ಕೊಟ್ಟ. ಅಷ್ಟರಲ್ಲಿ ನಮಗೆ ಹೊರಡುವ ಆದೇಶ ಬಂತು. ನಮಗೂ ನೀರು ಕೊಡಲಿಲ್ಲ, ಆತನೂ ಕುಡಿಯಲಿಲ್ಲ’ ಎಂದು ಈತನ ಸ್ನೇಹಿತ ಪ್ರಸೇನ್ಜಿತ್ ನೆನಪಿಸಿಕೊಳ್ಳುತ್ತಾರೆ.

1999ರ ಜೂನ್ನಲ್ಲಿ ಬಿಹಾರ್ ರೆಜಿಮೆಂಟಿನ 7ನೇ ಬೆಟಾಲಿಯನ್ಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾದರು ಸಂದೀಪ್. ಮುಂದಿನ ತಿಂಗಳೇ ಕಾರ್ಗಿಲ್ ಯುದ್ಧ -ಆಪರೇಷನ್ ವಿಜಯ್ ನಲ್ಲಿ- ಭಾಗವಹಿಸಿದರು. ಡಿಸೆಂಬರ್ 1999ರಲ್ಲಿ ಸಂದೀಪ್ ಮುನ್ನಡೆಸಿದ ಆರು ಸೈನಿಕರ ತಂಡ ಪೋಸ್ಟೊಂದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 2005ರಲ್ಲಿ ಸಂದೀಪ್ ಮೇಜರ್ ಪದವಿಗೇರಿದರು. ಜಮ್ಮು-ಕಾಶ್ಮೀರ, ರಾಜಸ್ಥಾನ ಹೀಗೆ ಬೇರೆ-ಬೇರೆ ಕಡೆಗಳಲ್ಲಿ ಕಾರ್ಯನಿರ್ವಹಿಸಿದ ನಂತರ ಮೇಜರ್ ಸಂದೀಪ್ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಗೆ ಸೇರಿಕೊಂಡರು. ಸೈನ್ಯದ ವಿವಿಧ ಆಪರೇಷನ್ಗಳಲ್ಲಿ ಭಾಗವಹಿಸಿ ಎಲ್ಲರಿಂದ ಮೆಚ್ಚುಗೆಗೊಳಗಾಗಿದ್ದರು ಮೇಜರ್ ಸಂದೀಪ್. ಸೈನ್ಯದ ಅತ್ಯಂತ ಕಠಿಣ ತರಬೇತಿ ಎಂದೇ ಕರೆಯುವ ಘಾತಕ್ ತರಬೇತಿಯಲ್ಲಿ ಮೊದಲ ಸ್ಥಾನಗಳಿಸಿದ್ದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಶೌರ್ಯ, ಸಾಹಸಕ್ಕೆ ಉದಾಹರಣೆ! 2007ರಲ್ಲಿ ಎನ್ಎಸ್ಜಿಯ ಸ್ಪೆಷಲ್ ಆ್ಯಕ್ಷನ್ ಗ್ರೂಪ್(ಎಸ್ಎಜಿ)ಗೆ ಆಯ್ಕೆಯಾದರು.

ಸಿನಿಮಾ ನೋಡುವುದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ ಅಚ್ಚುಮೆಚ್ಚಿನ ಕೆಲಸ ಅಂತೆ. ರಜಕ್ಕೆ ಮನೆಗೆ ಬಂದಾಗ ಮಲಯಾಳಂ ಸಿನಿಮಾಗಳನ್ನು ಒಟ್ಟಿಗೇ ಕೂತು ನೋಡುತ್ತಿದ್ದುದನ್ನು ಅವರ ತಾಯಿ ಧನಲಕ್ಷ್ಮಿಯವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಎಸ್ಎಜಿಗೆ ಆಯ್ಕೆಯಾದ ಒಂದೇ ವರ್ಷಕ್ಕೆ ಮುಂಬೈನ ತಾಜ್ ಹೊಟೆಲ್ನಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ವಿಷಯ ತಿಳಿದು ಆಪರೇಷನ್ ಬ್ಲಾಕ್ ಟಾರ್ನಡೊಗೆ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದು ಮೇಜರ್ ಸಂದೀಪ್ ಉನ್ನಿಕೃಷ್ಣನ್ರವರೇ. 27 ನವೆಂಬರ್ 2008ರಂದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹತ್ತು ಕಮ್ಯಾಂಡೊಗಳೊಂದಿಗೆ ತಾಜ್ ಹೊಟೆಲ್ ಒಳಹೊಕ್ಕರು. ತಾಜ್ ಹೊಟೆಲ್ನ ಟವರ್ ವಿಂಗ್ನಲ್ಲಿದ್ದ ಒತ್ತೆಯಾಳುಗಳನ್ನು ರಕ್ಷಿಸಲಾಗಿತ್ತು. ಹೊಟೆಲ್ನ ಪ್ಯಾಲೆಸ್ ವಿಂಗ್ನಲ್ಲಿರುವ ಕೆಲವರನ್ನು ರಕ್ಷಿಸುವ ಸಲುವಾಗಿ ಸಂದೀಪ್ ಮತ್ತು ಕಮ್ಯಾಂಡೊ ಸುನಿಲ್ ಯಾದವ್ ಅತ್ತ ಧಾವಿಸಿದರು. ಅತ್ತ ಕಡೆಯಿಂದ ಬಂದ ಗುಂಡುಗಳು ಕಮ್ಯಾಂಡೊ ಸುನಿಲ್ನ ಎರಡೂ ಕಾಲುಗಳನ್ನು ಬಲಹೀನಗೊಳಿಸಿದವು. ಮೇಜರ್ ಸಂದೀಪ್ ಸುನಿಲ್ ನನ್ನು ರಕ್ಷಿಸಿ, ಆತನನ್ನು ಹೊರಗೆ ಕಳಿಸುವ ಸಾಹಸಕ್ಕೆ ತೊಡಗಿದರು. ಭಯೋತ್ಪಾದಕರ ಕಡೆಯಿಂದ ಒಂದೇ ಸಮನೆ ಗುಂಡಿನ ಸುರಿಮಳೆ. ತನ್ನ ಹಿಂದಿದ್ದ ಕಮ್ಯಾಂಡೊಗಳಿಗೆ ‘ಮೇಲೆ ಬರಬೇಡಿ. ನಾನಿವರನ್ನು ನೋಡಿಕೊಳ್ಳುತ್ತೇನೆ’ ಎಂದ ಮೇಜರ್ ಸಂದೀಪ್ ರಿಗೆ, ಅಲ್ಲಿಂದ ಮೇಲಿನ ಮಹಡಿಗೆ ಹೋಗುವಷ್ಟರಲ್ಲಿ ಗುಂಡುಗಳು ತಗುಲಿದವು. ಈ ವೇಳೆಗಾಗಲೇ 14 ಜನರ ಪ್ರಾಣವನ್ನು ರಕ್ಷಿಸಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಕ್ತದ ಮಡುವಿನಲ್ಲಿ ಮುಳುಗಿದ್ದರು. ನವೆಂಬರ್ 28ರಂದು ಮೇಜರ್ ಸಂದೀಪ್ ವೀರಮರಣವನ್ನಪ್ಪಿದರು.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ ಈ ಸಾಹಸಕ್ಕೆ ಭಾರತ ಸರ್ಕಾರ 2009ರಲ್ಲಿ ‘ಅಶೋಕ ಚಕ್ರ’ವನ್ನು (ಮರಣೋತ್ತರ) ನೀಡಿ ಗೌರವಿಸಿದೆ. ಮೇಜರ್ ಸಂದೀಪ್ ರ ಮನೆ ಬೆಂಗಳೂರಿನ ಇಸ್ರೊ ಲೇಔಟ್ನಲ್ಲಿದೆ. ಸಂದೀಪ್ರ ಬಟ್ಟೆ, ಸೈನ್ಯದ ಸಮವಸ್ತ್ರ, ಅತ್ಯಮೂಲ್ಯ ಫೋಟೊಗಳು, ಆತನ ಪುಸ್ತಕಗಳು, ಹೀಗೆ ತಮ್ಮ ಮಗ ಉಪಯೋಗಿಸುತ್ತಿದ್ದ ಅಮೂಲ್ಯ ವಸ್ತುಗಳ ಪ್ರದರ್ಶನವನ್ನು ಉನ್ನಿಕೃಷ್ಣನ್ ದಂಪತಿಗಳು ಮನೆಯ ಮೇಲೆ ನಿಮರ್ಿಸಿದ್ದಾರೆ. ತಮ್ಮ ಮಗನ ನೆನಪಿನಲ್ಲಿ ಹಲವರ ಶಿಕ್ಷಣಕ್ಕೆ ಸಹಾಯ ಮಾಡುತ್ತಾ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುತ್ತಾ, ಬೇರೆ-ಬೇರೆ ಜಿಲ್ಲೆಗಳಿಗೆ ಭೇಟಿನೀಡಿ ಸಂದೀಪ್ರ ಕಥೆಯನ್ನು ಯುವಕರಿಗೆ ಹೇಳುತ್ತಾ, ಈ ಕೆಲಸಗಳಲ್ಲಿ ಪ್ರತಿನಿತ್ಯ ಮೇಜರ್ ಸಂದೀಪ್ರನ್ನು ಕಾಣುತ್ತಿದ್ದಾರೆ. ಪ್ರತಿವರ್ಷ ಸಂದೀಪ್ ರ ಹುಟ್ಟುಹಬ್ಬವನ್ನು ಅವರ ಮನೆಯಲ್ಲೇ ಆಚರಿಸಲಾಗುತ್ತದೆ. ಅಂದು ಕೇಕನ್ನು ಕತ್ತರಿಸಿ, ಅಕ್ಕಪಕ್ಕದ ಶಾಲೆಯ ಮಕ್ಕಳಿಗೆ ನೀಡಿ ಅವರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕನ್ನಡದ ಕೂಸು ಎನ್ನುವುದು ಹೆಮ್ಮೆಯ ಸಂಗತಿ. ಸಾಧ್ಯವಾದರೆ ಬೆಂಗಳೂರಿನ ಇಸ್ರೊ ಲೇಔಟ್ನಲ್ಲಿರುವ ಅವರ ಮನೆಗೆ ಭೇಟಿ ನೀಡಿ. ಯೋಧನೊಬ್ಬನ ತಂದೆ-ತಾಯಿಯರು ಹೇಗೆ ಪ್ರೇರಣೆ ತುಂಬಬಲ್ಲರು ಎಂಬ ಪ್ರತ್ಯಕ್ಷ ಅನುಭವವನ್ನು ಪಡೆದುಕೊಳ್ಳಿ.

 

Total Page Visits: 2617 - Today Page Visits: 5

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ